ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ: 4 ದಿನ ಗುಡುಗು ಮಿಂಚು ಸಹಿತ ಮಳೆ

Social Share

ಬೆಂಗಳೂರು,ಆ.3- ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಆರ್ಭಟಿಸುತ್ತಿದೆ. ಕಳೆದ ಮೂರು ದಿನಗಳಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದ್ದು, ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೊಡುಗು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ದೇವರಕೊಲ್ಲಿ ಹಾಗು ಕೊಯ್ನಾಡು ನಡುವಿನ ರಸ್ತೆ ಬಿರುಕು ಬಿಟ್ಟು, ಖಾಸಗಿ ಹಾಗೂ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಗಡಿಭಾಗವಾದ ಕಲ್ಲುಗುಂಡಿ, ಸಂಪಾಜೆ, ಗೂನಡ್ಕ ಗ್ರಾಮಗಳು ಜಲಾವೃತಗೊಂಡಿವೆ. ಭಾರೀ ಮಳೆಯಿಂದಾಗಿ ಸುಳ್ಯ ತಾಲ್ಲೂಕಿನ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು, ಮೈಸೂರು, ಮಂಗಳೂರು ಹೆದ್ದಾರಿ ಬಂದ್ ಆಗಿದೆ. ಸುಳ್ಯ ತಾಲ್ಲೂಖಿನ ಪೆರಾಜೆ, ಹರಂಬೂರು ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

ಹಾಸನದ ಶ್ರವಣಬೆಳಗೊಳದಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ವಿಂದ್ಯಾಗಿರಿಯಲ್ಲೂ ಕಲ್ಲು ಕುಸಿತವಾಗಿದೆ. ದೊಡ್ಡ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಚಿಂಗೋಳಿ ತಾಲ್ಲೂಕಿನ ದೇಗಲಮುಡಿ ಗ್ರಾಮದ ಪೂಡು ರಸ್ತೆಗೆ ನಿರ್ಮಿಸಿದ ಸೇತುವೆ ಮುಳುಗಡೆಯಾಗಿದೆ. ಕರಾವಳಿಯ ಎರಡು ಭಾಗಗಳಲ್ಲಿ ದಾಖಲೆಯ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಇನ್ನು ಐದು ದಿನ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ನಗರಪ್ರದೇಶಗಳ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿವೆ.
ಕಳೆದ ಮೂರು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಕೋಲಾರದಲ್ಲಿ ಭಾರೀ ಮಳೆಗೆ ಮನೆ ಕುಸಿದಿದೆ. ಕೆಲವೆಡೆ ರಸ್ತೆ ಸಂಪರ್ಕಕ್ಕೂ ಅಡ್ಡಿ ಉಂಟಾಗಿದೆ. ಹವಾಮಾನ ಮೂನ್ಸೂಚನೆ ಪ್ರಕಾರ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಇನ್ನು ನಾಲ್ಕು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯುವ ಲಕ್ಷಣಗಳಿವೆ.

ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಅಥವಾ ರಾತ್ರಿ ಗುಡುಗು ಮಿಂಚಿನಿಂದ ಕೂಡಿದ ಸುರಿಮಳೆಯಾಗುವ ಸಾಧ್ಯತೆಗಳಿವೆ. ನಿನ್ನೆ ಇಡೀ ದಿನ ಆಗಾಗ್ಗೆ ಮಳೆಯಾಗಿ ಜನರು ತತ್ತರಿಸುವಂತೆ ಮಾಡಿತ್ತು. ರಾತ್ರಿ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಮಡಿಕೇರಿ, ಅರಕಲಗೂಡು, ಕೊರಟಗೆರೆ, ಗೌರಿಬಿದನೂರು, ಯಲಹಂಕ, ಹೊಸಕೋಟೆ, ರಾಮನಗರ, ಕೆಆರ್.ಪೇಟೆ, ಮದ್ದೂರು, ಮಳವಳ್ಳಿಗಳಲ್ಲಿ ಭಾರೀ ಮಳೆಯಾದ ವರದಿಯಾಗಿದೆ.

ಕೊಡಗು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಉಳಿದಂತೆ ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ.

ಉಳಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ದಾವಣಗೆರೆ, ಹಾವೇರಿ, ವಿಜಯನಗರ, ಚಿತ್ರದುರ್ಗ, ಉಡುಪಿ, ಶಿವಮೊಗ್ಗ, ಧಾರವಾಡ, ಬೆಳಗಾವಿ , ಬಳ್ಳಾರಿ ಜಿಲ್ಲೆಗಳಲ್ಲಿ ಅತಿ ಕಡಿಮೆ ಪ್ರಮಾಣದ ಮಳೆಯಾಗಿದೆ.
ಸತತವಾಗಿ ಬೀಳುತ್ತಿರುವ ಮಳೆಯಿಂದ ಈಗಾಗಲೇ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ನಿರಂತರ ಮಳೆಯಿಂದಾಗಿ ಸಣ್ಣ ಕೆರೆಕಟ್ಟೆಗಳು ತುಂಬುತ್ತಿವೆ. ಜೊತೆಗೆ ಅತಿವೃಷ್ಟಿ ಉಂಟಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯೂ ಉಂಟಾಗಿದೆ.

Articles You Might Like

Share This Article