ವ್ಯಾಪಕ ಮಳೆ : ತುರ್ತು ಕ್ರಮ ಕೈಗೊಳ್ಳುವಂತೆ ಡಿಸಿಗಳಿಗೆ ಸಿಎಂ ಸೂಚನೆ

Social Share

ಬೆಂಗಳೂರು,ಆ.28-ರಾಜ್ಯದ ವಿವಿಧೆಡೆ ಪುನಃ ವ್ಯಾಪಕ ಮಳೆಯಾಗುತ್ತಿದ್ದು, ಅಗತ್ಯವಿರುವ ಕಡೆ ಜಿಲ್ಲಾಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದವರು,ಇಂದು ಸಂಜೆ ಮಳೆಯಿಂದಾಗಿ ಹೆಚ್ಚು ಹಾನಿಗೊಳಗಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನರೆನ್ಸ್ ಮೂಲಕ ಸಭೆ ನಡೆಸಲಾಗುವುದು ಎಂದರು.

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮುಖೇನ ಮಳೆ ಹಾನಿ ಕುರಿತಂತೆ ಪ್ರಾಥಮಿಕ ವರದಿಯನ್ನು ಪಡೆದಿದ್ದೇನೆ. ಜನ-ಜಾನುವಾರುಗಳ ರಕ್ಷಣೆಗೆ ಮೊದಲ ಅದ್ಯತೆ ನೀಡಬೇಕು, ಹಾನಿಗಳ ಕುರಿತಂತೆ ಕೂಡಲೇ ವರದಿ ನೀಡಬೇಕೆಂದು ಸೂಚಿಸಲಾಗಿದೆ ಎಂದರು.

ತಗ್ಗುಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಸಾರ್ವಜನಿಕರು ಕೂಡ ಅನಗತ್ಯವಾಗಿ ನೀರು ಹೆಚ್ಚಿರುವ ಕಡೆ ಹೋಗಬಾರದು. ಇನ್ನು ಎರಡು ಮೂರು ದಿನಗಳ ಕಾಲ ಭಾರೀ ಮಳೆಯಾಗಬಹುದೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಸ್ಥಳೀಯ ಆಡಳಿತಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಮಳೆ ಹಾನಿ ಕುರಿತಂತೆ ವರದಿ ನೀಡಿದ ತಕ್ಷಣ ಪರಿಹಾರ ನೀಡಲಾಗುವುದು. ಸಧ್ಯ ಡಿಸಿಗಳ ಖಾತೆಯಲ್ಲಿರುವ ಹಣವನ್ನು ತುರ್ತು ಪರಿಹಾರಕ್ಕೆ ಬಳಸಿಕೊಳ್ಳಲು ಸೂಚಿಸಲಾಗಿದೆ. ಹಣದ ಕೊರತೆ ಇಲ್ಲ. ಯಾರೂ ಕೂಡ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್‍ಕುಮಾರ್ ಕಟೀಲ್ ಅವರು ಅಧಿಕಾರ ವಹಿಸಿ ಇಂದಿಗೆ ಮೂರು ವರ್ಷವಾಯಿತು. ಅವರೊಬ್ಬ ಅತ್ಯುತ್ತಮ ಸಂಘಟನಾಕಾರ. ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷ ಮುನ್ನಡೆಸುತ್ತಿದ್ದಾರೆ. ಇದರಿಂದ ಸಂಘಟನೆ ಹಿಂದೆಂದಿಗಿಂತಲೂ ಹೆಚ್ಚು ಪ್ರಬಲವಾಗಿದೆ ಎಂದರು.

ಕಟೀಲ್ ಅವರು ಪಕ್ಷವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಜಿಲ್ಲಾ ಹಾಗು ತಾಲ್ಲೂಕು ಮಟ್ಟದಲ್ಲಿ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಅನೇಕ ಚುನಾವಣೆಗಳನ್ನು ಗೆಲ್ಲಲು ಕಾರಣೀಭೂತರಾಗಿದ್ದಾರೆ. ಕಟೀಲ್ ನೇತೃತ್ವದಲ್ಲಿ ಪಕ್ಷವನ್ನು ಮುನ್ನಡೆಸುತ್ತೇವೆ.ಅವರ ನೇತೃತ್ವದಲ್ಲಿ ಪಕ್ಷ ಮತ್ತಷ್ಟು ಬಲಪಡೆಯಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗೆ, ಪ್ರಮುಖರ ನೇತೃತ್ವದಲ್ಲಿ ರಾಜ್ಯ ಪ್ರವಾಸ ನಡೆಸಬೇಕೆಂದು ಉದ್ದೇಶಿಸಲಾಗಿದೆ. ನಾನು, ನಮ್ಮ ರಾಜ್ಯಾಧ್ಯಕ್ಷರು, ಯಡಿಯೂರಪ್ಪನವರು ಸೇರಿದಂತೆ ಮತ್ತಿತರರು ಪ್ರವಾಸ ಕೈಗೊಳ್ಳಲಿದ್ದೇವೆ. ರಾಜಾಧ್ಯಕ್ಷರ ಬದಲಾವಣೆ ಕುರಿತಂತೆ ನನಗೆಯಾವುದೇ ಮಾಹಿತಿ ಇಲ್ಲ. ಪಕ್ಷದಲ್ಲಿ ಬದಲಾವಣೆ ಚರ್ಚೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಚಾಮರಾಜಪೇಟೆ ಮೈದಾನದ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಕಂದಾಯ ಸಚಿವ ಆರ್.ಅಶೋಕ್ ಅವರು ನಿನ್ನೆ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಆದಷ್ಟು ಬೇಗ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಈ ಬಗ್ಗೆ ಯಾರಿಗೂ ಯಾವ ರೀತಿಯ ಗೊಂದಲ ಇಲ್ಲ ಎಂದು ಪುನರುಚ್ಚರಿಸಿದರು.

Articles You Might Like

Share This Article