ಬೆಂಗಳೂರು,ಸೆ.13-ಅತಿವೃಷ್ಟಿ, ಪ್ರವಾಹಕ್ಕೆ ಸಂಬಂಧಿಸಿದಂತೆ ಇಂದಿನಿಂದ ಮೂರು ದಿನಗಳ ಕಾಲ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ತಿಳಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಮಾರ್ಪಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. ವಿಷಯದ ಮಹತ್ವ ಅರಿತು ಈ ರೀತಿ ಮಾಡಲಾಗಿದೆ. ಸದಸ್ಯರ ಹಕ್ಕನ್ನು ಮೊಟಕುಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಮಾತನಾಡಿ, ಮಹತ್ವದ ಹಾಗೂ ಜರೂರಾದ ವಿಷಯವಾಗಿದ್ದರಿಂದ ನಿಲುವಳಿ ಸೂಚನೆಗೆ ಅವಕಾಶ ಕೋರಲಾಗಿತ್ತು. ಪೂರ್ವಭಾವಿ ವಿಷಯ ಪ್ರಸ್ತಾಪಕ್ಕೂ ಅವಕಾಶ ಮಾಡಿಕೊಡಲಾಗಿದೆ. ನಿಯಮ 60ನ್ನು ತೆಗೆದುಬಿಡಿ. ನಿಯಮ ಉಲ್ಲಂಘನೆಯಾಗುವುದು ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಗ ಕಂದಾಯ ಸಚಿವ ಆರ್.ಅಶೋಕ್ ಚರ್ಚೆಗೆ ಸರ್ಕಾರ ಸಿದ್ದವಿದೆ ಎಂದರು. ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ನಿಲುವಳಿ ಸೂಚನೆಯ ನಿಯಮ ಉಲ್ಲಂಘಿಸಿಲ್ಲ. ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. ಮನವರಿಕೆಯಾಗಿರುವುದರಿಂದ ಮತ್ತೆ ಮನವರಿಕೆ ಪ್ರಸ್ತಾಪ ಬೇಡ ಚರ್ಚೆ ಆರಂಭಿಸಿ ಎಂದರು.
ಆಗ ಮಧ್ಯಪ್ರವೇಶಿಸಿದ ಸಿಎಂ ಬೊಮ್ಮಾಯಿ, ನಿಲುವಳಿ ಸೂಚನೆಗೆ ಒಪ್ಪದಿದ್ದಾಗ ಮನವರಿಕೆ ಮಾಡಿಕೊಡಲು ಪೂರ್ವಭಾವಿ ಪ್ರಸ್ತಾಪ ಮಾಡಲಾಗುತ್ತದೆ. ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಎಲ್ಲರು ಪಾಲ್ಗೊಳ್ಳಬಹುದು. ಪುನರಾವರ್ತನೆಯ ಪ್ರಸ್ತಾಪ ಬೇಡ ಹಾಗೂ ಸಮಯದ ಉಳಿತಾಯದಿಂದ ಅಧ್ಯಕ್ಷರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಆಗ ಸಿದ್ದರಾಮಯ್ಯ ಸದನದ ನಿಯಮಾವಳಿಯನ್ನು ಪಾಲಿಸಬೇಕಲ್ಲವೇ ಎಂದು ಪ್ರಶ್ನಿಸಿದರು. ಅಷ್ಟರಲ್ಲಿ ಸಭಾಧ್ಯಕ್ಷರು, ನೀರು ಹರಿದು ಹೋಗಬಾರದು. ಚರ್ಚೆ ಶುರು ಮಾಡಿ ಎಂದು ಸಿದ್ದರಾಮಯ್ಯನವರಿಗೆ ಸೂಚಿಸಿದರು. ನೀರು ಜಾಸ್ತಿಯೇ ಇದೆ ಎಂದು ಹೇಳುತ್ತಾ ಅತಿವೃಷ್ಟಿ ಹಾಗೂ ಪ್ರವಾಹದ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದರು.