ಐಟಿ-ಬಿಟಿ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ, ಅ.10ರಿಂದ ಹೆಲಿಕಾಫ್ಟರ್ ಸೇವೆ ಆರಂಭ

Social Share

ಬೆಂಗಳೂರು,ಅ.4-ಈ ಬಾರಿಯ ದಸರಾ ಹಬ್ಬ ಐಟಿ-ಬಿಟಿ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ನಗರದ ಸಂಚಾರ ದಟ್ಟಣೆಯಿಂದ ರೋಸಿ ಹೋಗಿದ್ದ ಹೈಟೆಕ್ ಮಂದಿ ಇನ್ನು ಮುಂದೆ ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ಹೆಲಿಕಾಫ್ಟರ್ ಸೇವೆ ಪಡೆಯಬಹುದಾಗಿದೆ.

ಬಹುನಿರೀಕ್ಷಿತ ಹೆಲಿಕಾಫ್ಟರ್ ಸೇವೆಯನ್ನು ಇದೇ 10 ರಿಂದ ಜಾರಿಗೆ ತರಲಾಗುತ್ತಿದೆ ಎಂದು ಬ್ಲೇಡ್ ಇಂಡಿಯಾ ಸಂಸ್ಥೆ ಘೋಷಣೆ ಮಾಡಿದೆ. ನಗರದ ಟ್ರಾಫಿಕ್ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ಸಾಧ್ಯವಾಗದೆ ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯಬೇಕಿದ್ದ ಐಟಿ-ಬಿಟಿ ಮಂದಿ ಇನ್ನು ಮುಂದೆ ಕೇವಲ 12 ನಿಮಿಷಗಳಲ್ಲೇ ಕಚೇರಿ ತಲುಪಲು ಈ ಹೆಲಿ ಸೇವೆ ಸಹಕಾರಿಯಾಗಲಿದೆ ಎಂದು ಭಾವಿಸಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಚ್‍ಎಎಲ್ ನಿಲ್ದಾಣಗಳ ನಡುವೆ ಈ ಹೆಲಿ ಸೇವೆ ಜಾರಿಗೆ ತರಲಾಗುತ್ತಿದೆ ಎಂದು ಬ್ಲೇಡ್ ಇಂಡಿಯಾ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಹೆಲಿ ಸೇವೆ ಎಂಬ ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಸಂಸ್ಥೆ ಈಗಾಗಲೇ ಎರಡು ಹೆಲಿಕಾಫ್ಟರ್‍ಗಳ ಹಾರಾಟಕ್ಕೆ ಸಿದ್ದತೆ ಮಾಡಿಕೊಂಡಿದೆ.

ನಗರದಲ್ಲಿ ಹೆಲಿ ಸೇವೆ ಆರಂಭಿಸಲು ನಾವು ಸಿದ್ದರಾಗಿದ್ದು ಅ.10ರಿಂದ ಪ್ರಾಯೋಗಿಕವಾಗಿ ಹೆಲಿಕಾಫ್ಟರ್ ಹಾರಾಟ ನಡೆಸುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಹೆಚ್‍ಎಎಲ್ ಟು ಏರ್‍ಪೆಪೋರ್ಟ್ ಎಂಬ ಪೈಲೆಟ್ ಪ್ರಾಜೆ ಯೋಜನೆ ಅಡಿಯಲ್ಲಿ ಅಕ್ಟೋಬರ್ 10 ರಿಂದ ಹೆಲಿ ಸೇವೆ ಆರಂಭವಾಗಲಿದ್ದು, ಹೆಚ್‍ಎಎಲ್‍ನಿಂದ ಕೇವಲ 12 ನಿಮಿಷಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ.

ಕಾರಿನಲ್ಲಿ ಹೆಚ್‍ಎಎಲ್‍ನಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕಾದರೆ ಸುಮಾರು ಎರಡು ಗಂಟೆಗಳು ಬೇಕಾಗುತ್ತದೆ. ಇಂತಹ ದೂರವನ್ನು ಹೆಲಿಕಾಫ್ಟರ್ ಮೂಲಕ ಕೇವಲ 12 ನಿಮಿಷಗಳಲ್ಲಿ ತಲುಪಲು ಸಾಧ್ಯವಿರುವುದರಿಂದ ಇದು ಸಾವಿರಾರು ಮಂದಿ ಐಟಿ-ಬಿಟಿ ಉದ್ಯೋಗಿಗಳಿಗೆ ವರದಾನವಾಗಲಿದೆ ಎಂದೇ ಭಾವಿಸಲಾಗಿದೆ.

ವಾರದಲ್ಲಿ 5 ದಿನಗಳ ಕಾಳ ಹೆಲಿಕಾಪ್ಟರ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದು ಹೆಲಿಕಾಫ್ಟರ್‍ನಲ್ಲಿ ಐದು ಮಂದಿ ಒಟ್ಟಿಗೆ ಪ್ರಯಾಣ ಬೆಳೆಸಬಹುದಾಗಿದೆ. ಹೆಲಿಕಾಫ್ಟರ್ ಸೇವೆ ಬಳಸಿಕೊಳ್ಳಲು ಇಚ್ಚಿಸುವವರು 3250 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.15 ರವರೆಗೂ ಎರಡು ಹೆಲಿಕಾಫ್ಟರ್‍ಗಳು ಹಾರಾಟ ನಡೆಸಲಿವೆ.

ಈ ಹೆಲಿ ಸೇವೆಯಿಂದ ಹೆಚ್‍ಎಎಲ್, ಇಂದಿರಾನಗರ, ಕೋರಮಂಗಲ, ಸರ್ಜಾಪುರ , ಮಹದೇವಪುರ ಟಿಕ್ಕಿಗಳಿಗೆ ಭಾರಿ ಅನಕೂಲವಾಗಲಿದೆ. ಬಹುನಿರೀಕ್ಷಿತ ಹೆಲಿ ಸೇವೆಗೆ ಈಗಾಗಲೇ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಅನುಮತಿ ದೊರೆತಿದ್ದು, ಹೆಲಿಕಾಫ್ಟರ್ ಸೇವೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.

Articles You Might Like

Share This Article