ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀದಿಸಲು ಆದೇಶ

Spread the love

ನವದೆಹಲಿ,ಆ.26- ಕೇಂದ್ರ ಸರ್ಕಾರ ಉದ್ದು ಮತ್ತು ಹೆಸರುಕಾಳಿಗೆ ಬೆಂಬಲ ಬೆಲೆ ನಿಗದಿಪಡಿಸಿ ಮಾರುಕಟ್ಟೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಂದು ಕ್ವಿಂಟಾಲ್ ಹೆಸರುಕಾಳಿಗೆ 7275, ಉದ್ದುಗೆ 6,300 ರೂ. ನಿಗದಿಪಡಿಸಿದೆ. ಸಂಪುಟದ ತೀರ್ಮಾನವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು, ಒಂದು ಕ್ವಿಂಟಾಲ್ ಹೆಸರುಕಾಳಿಗೆ 7275 ಹಾಗೂ ಉದ್ದಿಗೆ 6,300 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ದೇಶಾದ್ಯಂತ 30,000 ಮೆಟ್ರಿಕ್ ಟನ್ ಹೆಸರುಕಾಳು ಹಾಗೂ 10,000 ಮೆಟ್ರಿಕ್ ಟನ್ ಉದ್ದನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಅವಕಾಶವಿದೆ. ಯಾವ ಸಂದರ್ಭದಲ್ಲಿ ಯಾವಾಗ ಖರೀದಿಸಬೇಕೆಂಬ ತೀರ್ಮಾವನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದೇವೆ ಎಂದು ಹೇಳಿದರು. ಒಂದೊಂದು ರಾಜ್ಯದಲ್ಲಿ ಬೆಳೆ ಬೇರೆ ಬೇರೆ ತಿಂಗಳಲ್ಲಿ ಬರುತ್ತದೆ. ಕಟಾವು ಮಾಡುವ ಸಮಯವು ಬದಲಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರಗಳೇ ಖರೀದಿ ಮಾಡುವ ದಿನಾಂಕವನ್ನು ನಿಗದಿಪಡಿಸಬೇಕು. ಮೂರು ತಿಂಗಳೊಳಗೆ ಈ ಪ್ರಕ್ರಿಯೆ ಮುಗಿಯಬೇಕೆಂದು ಸೂಚಿಸಿದರು.

ಕಬ್ಬಿನ ದರ ಹೆಚ್ಚಳ:  ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯು ಒಂದು ಕ್ವಿಂಟಾಲ್ ಕಬ್ಬಿಗೆ 290 ರೂ. ದರ ಹೆಚ್ಚಳ ಮಾಡುವ ಮತ್ತೊಂದು ಪ್ರಮುಖ ತೀರ್ಮಾನವನ್ನು ಕೈಗೊಂಡಿದೆ ಎಂದರು. ಇತ್ತೀಚೆಗೆ ಕೇಂದ್ರ ಸರ್ಕಾರವು ರಾಜ್ಯ ಮತ್ತು ಕಬ್ಬು ಖರೀದಿ ಮಾಡುವವರ ಜೊತೆ ಸಭೆ ನಡೆಸಿತು. ದರ ಹೆಚ್ಚಳ ಮಾಡಬೇಕೆಂಬ ಪ್ರಸ್ತಾವನೆ ಕೇಳಿಬಂದಿದ್ದರಿಂದ ಒಂದು ಕ್ವಿಂಟಾಲ್ ಕಬ್ಬಿಗೆ 290 ರೂ. ಎಫ್‍ಆರ್‍ಪಿ ದರ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.

ಇದರಿಂದ ಕಬ್ಬು ಬೆಳೆಗಾರರು, ಕಬ್ಬು ಖರೀದಿಸುವವರು, ರೈತರು, ಕಾರ್ಮಿಕರು ಮತ್ತಿತರರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಒಂದು ಕ್ವಿಂಟಾಲ್ ಕಬ್ಬು ಬೆಳೆಯಲು 155 ರೂ. ಖರ್ಚಾಗುತ್ತದೆ. ಇದರ ಶೇ.10ರಷ್ಟಾದರೂ ಹಣವನ್ನು ಸರ್ಕಾರ ಭರಿಸಬೇಕೆಂಬುದು ಅನೇಕರ ಒತ್ತಾಯವಾಗಿತ್ತು. ಇದರಂತೆ ನಾವು ಒಂದು ಕ್ವಿಂಟಾಲ್‍ಗೆ 290 ರೂ. ಹೆಚ್ಚಳ ಮಾಡಿದ್ದೇವೆ.

ಸುಮಾರು 5 ಕೋಟಿ ರೈತರು ಹಾಗೂ 5 ಲಕ್ಷ ಕಾರ್ಖಾನೆ ಮಾಲೀಕರು ಇದರ ಲಾಭವನ್ನು ಪಡೆಯಲಿದ್ದಾರೆ ಎಂದು ಹೇಳಿದರು. ಇನ್ನು ಮುಂದೆ ಎಥೆನಾಲ್ ಬಳಕೆಗೆ ಮತ್ತಷ್ಟು ಒತ್ತು ನೀಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ.ಎಥೆನಾಲ್ ಬಳಕೆಯಿಂದ ನಾವು ಪೆಟ್ರೋಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು.

2018-19ರಲ್ಲಿ 3.3 ಮಿಲಿಯನ್ ಮೆಟ್ರಿಕ್ ಟನ್ ಎಥಿನಾಲ್ ಬಳಕೆ ಮಾಡಲಾಗಿತ್ತು. 2019-20ರಲ್ಲಿ 9.2 ಮಿಲಿಯನ್ ಮೆಟ್ರಿಕ್ ಟನ್ ಬಳಕೆ ಮಾಡಲಾಯಿತು. ಈ ವರ್ಷ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.

Facebook Comments