Sunday, July 20, 2025
Homeರಾಜ್ಯಆರ್‌ಎಸ್‌‍ಎಸ್‌‍ ಮುಖಂಡರ ಮನೆ ಮೇಲೆ ದಾಳಿ, ಕಾರಣ ಕೇಳಿ ಪೊಲೀಸ್‌‍ ವರಿಷ್ಠಾಧಿಕಾರಿಗೆ ಹೈಕೋರ್ಟ್‌ ನೋಟಿಸ್‌‍

ಆರ್‌ಎಸ್‌‍ಎಸ್‌‍ ಮುಖಂಡರ ಮನೆ ಮೇಲೆ ದಾಳಿ, ಕಾರಣ ಕೇಳಿ ಪೊಲೀಸ್‌‍ ವರಿಷ್ಠಾಧಿಕಾರಿಗೆ ಹೈಕೋರ್ಟ್‌ ನೋಟಿಸ್‌‍

High Court issues notice to Superintendent of Police seeking reason for raid on RSS leader's house

ಬೆಂಗಳೂರು,ಜೂ.20- ಆರ್‌ಎಸ್‌‍ಎಸ್‌‍ ಮುಖಂಡರ ಮನೆ ಮೇಲಿನ ದಾಳಿ ಸಂಬಂಧ, ಹೈಕೋರ್ಟ್‌ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್‌‍ ವರಿಷ್ಠಾಧಿಕಾರಿಗೆ ಕಾರಣ ಕೇಳಿ ನೋಟಿಸ್‌‍ ಜಾರಿ ಮಾಡಿದೆ.

ಯು.ಜಿ.ರಾಧಾ ಅವರ ಮನೆ ಮೇಲೆ ದಾಳಿಗೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ಡಾ.ಅರುಣ್‌ ಕುಮಾರ್‌ಗೆ ಕಾರಣ ಕೇಳಿ ನೋಟಿಸ್‌‍ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಸಲ್ಲಿಸಬೇಕು. ಅಷ್ಟೇ ಅಲ್ಲದೇ ಕಾನೂನು ಹೊರತಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ತಾಕೀತು ಮಾಡಿದೆ.

ಯಾವುದೇ ಪ್ರಕರಣದಲ್ಲಿ ಶಾಮೀಲಾಗಿರದ ಆರೆಸ್‌‍ಎಸ್‌‍ ಹಾಗೂ ಹಿಂದೂ ಮುಖಂಡರ ಮನೆಗಳಿಗೆ ರಾತ್ರಿ ವೇಳೆ ತೆರಳಿ ಫೋಟೊ ತೆಗೆಸಿದ್ದರು.ಉಪ್ಪಿನಂಗಡಿ ಮನೆಗೆ ರಾತ್ರಿ ಬಂದಿದ್ದ ಪೊಲೀಸರು ಫೋಟೊ ತೆಗೆದು ಅಪ್‌ಲೋಡ್‌ ಮಾಡಿದ್ದರು. ನಮಗೆ ಹಿರಿಯ ಅಧಿಕಾರಿಗಳ ಆದೇಶವಿದೆ ಎಂದು ಪೊಲೀಸರು ಹೇಳಿದ್ದರು.

ಆದರೆ, ದಾಖಲೆ ತೋರಿಸಿರಲಿಲ್ಲ.ನನ್ನ ಮೇಲೆ ಯಾವುದೇ ಕ್ರಿಮಿನಲ್‌ ಪ್ರಕರಣ ಇಲ್ಲದೇ ಇದ್ದರೂ ಆರೋಪಿಯ ರೀತಿ ನನ್ನನ್ನು ಪೊಲೀಸರು ನಡೆಸಿಕೊಂಡಿದ್ದಾರೆ. ಇದರಿಂದ ನನ್ನ ಖಾಸಗಿತನ, ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ. ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪೊಲೀಸರು ವಿನಾಕಾರಣ ಕಸಿದಿದ್ದಾರೆ. ವಿಚಾರಣೆ ನಡೆಸುವ ಮೂಲಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ಹೀಗಾಗಿ ನನಗೆ 20 ಲಕ್ಷ ರೂ. ಮಾನನಷ್ಟ ಪರಿಹಾರ ನೀಡುವಂತೆ ಹೈಕೋರ್ಟ್‌ಗೆ ದೂರು ನೀಡಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಸುನಿಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ, ದಕ್ಷಿಣ ಕನ್ನಡ ಜಿಲ್ಲಾ ಎಸ್‌‍ಪಿಗೆ ನೋಟಿಸ್‌‍ ನೀಡಿದೆ. ದೂರುದಾರರ ಪರವಾಗಿ ನ್ಯಾಯವಾದಿ ಅರುಣ್‌ ಶ್ಯಾಮ್‌ ವಾದಿಸಿದ್ದರು.

ಯು.ಜಿ.ರಾಧಾ ಅವರು ಈಗಾಗಲೇ ರಾಜ್ಯ ಪೊಲೀಸ್‌‍ ದೂರು ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಪ್ರತ್ಯೇಕ ದೂರು ನೀಡಿದ್ದಾರೆ. ಹಿಂದೂ ನಾಯಕರ ಮನೆಗಳಿಗೆ ಮಧ್ಯರಾತ್ರಿ ತೆರಳಿ ಫೋಟೋ ತೆಗೆದು ಜಿಪಿಎಸ್‌‍ ಅಪ್‌ಲೋಡ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಪೊಲೀಸ್‌‍ ದೂರು ಪ್ರಾಧಿಕಾರ ಜಿಲ್ಲಾ ಎಸ್‌‍ಪಿಗೆ ನೋಟಿಸ್‌‍ ಜಾರಿ ಮಾಡಿದೆ.

ಶ್ರೀ ರಾಮ ಶಾಲಾ ಸಂಚಾಲಕ, ವೃತ್ತಿಯಲ್ಲಿ ಔಷಾಧಾಲಯದ ಮಾಲಕರಾದ ಯು.ಜಿ. ರಾಧಾ ಅವರಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ. ಇವರ ವಿರುದ್ಧ ಇಲ್ಲಿಯವರೆಗೆ ಯಾವುದೇ ಪೊಲೀಸ್‌‍ ಪ್ರಕರಣ ದಾಖಲಾಗಿಲ್ಲ.. ಫೋಟೋ ಯಾಕೆ ತೆಗೆದಿದ್ದೀರಿ ಎನ್ನುವುದಕ್ಕೆ ಕಾರಣ ನೀಡಿಲ್ಲ. ಪ್ರಶ್ನಿಸಿದರೆ ಪೊಲೀಸರು ಮೇಲಾಧಿಕಾರಿಗಳ ಆದೇಶ ಎಂಬ ಉತ್ತರ ನೀಡಿದ್ದರು ಎಂದು ಯು.ಜಿ. ರಾಧಾ ಹೇಳಿದ್ದರು.

ಯಾವುದೇ ಕಾರಣವಿಲ್ಲದೆ ಮಧ್ಯರಾತ್ರಿ ವೇಳೆ ಆರೆಸ್‌‍ಎಸ್‌‍ ನಾಯಕರೊಬ್ಬರ ಮನೆಗೆ ಪೊಲೀಸರು ಭೇಟಿ ನೀಡಿ ಫೋಟೊ ತೆಗೆಸಿಕೊಂಡು ಜಿಪಿಎಸ್‌‍ಗೆ ಅಪ್‌ಲೋಡ್‌ ಮಾಡಿದ್ದ ಪ್ರಕರಣ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಎಸ್‌‍ಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.ಹಿಂದೂ ಕಾರ್ಯಕರ್ತ ಸುಹಾಸ್‌‍ ಶೆಟ್ಟಿ ಹತ್ಯೆ ಘಟನೆ ನಂತರ ದಕ್ಷಿಣ ಕನ್ನಡ ಜಿಲ್ಲೆ ಉದ್ವಿಗ್ನಗೊಂಡಿತ್ತು. ಹಿಂಸಾಚಾರ ತಡೆಗೆ ಪೊಲೀಸರು ವಿವಿಧ ಕ್ರಮ ಕೈಗೊಂಡಿದ್ದರು. ಆದರೆ, ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪೊಲೀಸರು ವಿನಾಕಾರಣ ಕಸಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

RELATED ARTICLES

Latest News