ಬೆಂಗಳೂರು, ಜ.12- ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲೂ ಪಾದಯಾತ್ರೆಗೆ ಹೇಗೆ ಮತ್ತು ಏಕೆ ಅವಕಾಶ ನೀಡಲಾಗಿದೆ. ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ಕೆಪಿಸಿಸಿ ಕೈಗೊಂಡಿರುವ ಪಾದಯಾತ್ರೆಯನ್ನು ತಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಾೀಶರಾದ ರಿತುರಾಜ್ ಅವಸ್ಥಿ ಮತ್ತು ಸೂರಜ್ ಗೋವಿಂದರಾಜ್ ಅವರ ವಿಭಾಗೀಯ ಪೀಠ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಧರಣಿ, ಮೆರವಣಿಗೆಗಳು ಸೇರಿ ಎಲ್ಲ ಸಾರ್ವಜನಿಕ ಚಟುವಟಿಕೆಗಳನ್ನು ನಿರ್ಬಂಧಿಸಿ ನೀವು ಆದೇಶ ಹೊರಡಿಸಿದ್ದರೂ ಪಾದಯಾತ್ರೆಯಂತಹ ಕಾರ್ಯಕ್ರಮಗಳು ನಡೆಯಲು ಅವಕಾಶ ಮಾಡಿಕೊಟ್ಟಿರುವುದು ಏಕೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದು, ಒಂದು ದಿನದ ಕಾಲಾವಕಾಶ ನೀಡಿರುವ ನ್ಯಾಯಾಲಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ರ್ಯಾಲಿಗೆ ಅನುಮತಿ ನೀಡಿಲ್ಲವೆಂದರೆ ಪಾದಯಾತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಯಾರಿಗಾಗಿ ಕಾಯುತ್ತಿದ್ದೀರಾ, ಕೋವಿಡ್ ಬಿಗಡಾಯಿಸುತ್ತಿರುವಾಗ ಶಿಷ್ಟಾಚಾರ ಪಾಲಿಸುತ್ತಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದೆ. ಧರಣಿ, ಮೆರವಣಿಗೆಗಳು ಸೇರಿ ಎಲ್ಲ ರೀತಿಯ ಸಾರ್ವಜನಿಕ ಚಟುವಟಿಕೆಗಳನ್ನು ನಿರ್ಬಂಸಿ ಸರ್ಕಾರವೇ ಆದೇಶ ಹೊರಡಿಸಿದೆ. ಪಾದಯಾತ್ರೆಗೆ ಅನುಮತಿ ನಿರಾಕರಿಸಿರುವ ರಾಮನಗರ ಜಿಲ್ಲಾಡಳಿತ ಪಾದಯಾತ್ರೆ ನಡೆಸದಂತೆ ಕೆಪಿಸಿಸಿಗೆ ನೋಟಿಸ್ ನೀಡಿದೆ. ಹೀಗಿದ್ದರೂ ಅದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಏಕೆ ಎಂದು ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿದೆ.
ಪಾದಯಾತ್ರೆ ಆಯೋಜಕರು ಹಾಗೂ ಅದರಲ್ಲಿ ಪಾಲ್ಗೊಂಡವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ನಿಯಮಗಳು ಉಲ್ಲಂಘನೆಯಾಗುತ್ತಿದ್ದರೂ ಕ್ರಮ ಜರುಗಿಸದಷ್ಟು ಅಸಮರ್ಥವಾಗಿದೆಯೇ ಸರ್ಕಾರ ಎಂದು ಕೋರ್ಟ್ ಕಿಡಿಕಾರಿದೆ.
ಸಾಂಕ್ರಾಮಿಕ ಪರಿಸ್ಥಿತಿ ಸಂದರ್ಭದಲ್ಲಿ ಪಾದಯಾತ್ರೆ ನಡೆಸದಂತೆ ನೋಟಿಸ್ ನೀಡಿದ ನಂತರವೂ ಪಾದಯಾತ್ರೆ ನಡೆಸುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ರಾಮನಗರ ಜಿಲ್ಲಾಡಳಿತ ವಿಫಲವಾಗಿದೆ. ಅಲ್ಲಿನ ಮುಖ್ಯಸ್ಥರನ್ನು ವಜಾಗೊಳಿಸಲು ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಕೋರ್ಟ್‍ಗೆ ಸೂಕ್ತ ವಿವರಣೆ ನೀಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿರುವ ಕೋರ್ಟ್ ಪಾದಯಾತ್ರೆ ಆಯೋಜನೆಗೆ ಸಂಬಂಧಪಟ್ಟ ಪ್ರಾಕಾರದಿಂದ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ತಿಳಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನಿರ್ದೇಶಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಪಾದಯಾತ್ರೆ ಕೈಗೊಂಡಿರುವ ಕೆಪಿಸಿಸಿ ಸರ್ಕಾರ ವಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲು ಯಾವ ಕ್ರಮ ಕೈಗೊಂಡಿದೆ, ಈ ಬಗ್ಗೆ ಮುಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
