ಬೆಂಗಳೂರು,ಫೆ.14- ಆನ್‍ಲೈನ್ ಗೇಮ್ಸ್ ಬೆಟ್ಟಿಂಗ್ ನಿಷೇಧಗೊಳಿಸಿ ರಾಜ್ಯಸರ್ಕಾರ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಕಂಪೆನಿಗಳು ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಇಂದು ಮುಖ್ಯನ್ಯಾಯಮೂರ್ತಿ ರಿತುರಾಜ್ ಆವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ಪ್ರಕಟಿಸಿತು.
ರಾಜ್ಯದಲ್ಲಿ ಎಲ್ಲ ಬಗೆಯ ಆನ್‍ಲೈನ್ ಗೇಮ್ಸ್ ಮತ್ತು ಬೆಟ್ಟಿಂಗ್ ನಿಷೇಧ ಮಾಡಿ ರಾಜ್ಯ ಸರ್ಕಾರ ಪೊಲೀಸ್ ಕಾಯ್ದೆಗೆ ಮಾಡಿದ್ದ ತಿದ್ದುಪಡಿಯನ್ನು ಹೈಕೋರ್ಟ್ ಇಂದು ರದ್ದುಪಡಿಸಿತು. ರಾಜ್ಯಸರ್ಕಾರದ ತಿದ್ದುಪಡಿ ಸಂವಿಧಾನ ಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ನಿಯಮಾನುಸಾರ ಹೊಸ ಕಾಯ್ದೆ ಮಾಡಬಹುದಾಗಿದೆ ಎಂದು ಆದೇಶಿಸಿದೆ.
ಆನ್‍ಲೈನ್ ಗೇಮ್ಸ್ ಕಂಪೆನಿಗಳ ವಿರುದ್ಧ ಸದ್ಯಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಬಾರದು ಮತ್ತು ಅವುಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಕೂಡ ಮಾಡಬಾರದು ಎಂದು ಮಹತ್ವದ ಆದೇಶ ನೀಡಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆಯಾದಂತಾಗಿದೆ.
120 ಪುಟಗಳ ವಿಭಾಗೀಯ ಪೀಠದ ತೀರ್ಪಿನಲ್ಲಿ 2021ರಲ್ಲಿ ಸರ್ಕಾರ ಪೊಲೀಸ್ ಕಾಯ್ದೆಗೆ ಮಾಡಿದ ತಿದ್ದುಪಡಿಯನ್ನು ಸಂಪೂರ್ಣ ರದ್ದುಪಡಿಸಿಲ್ಲ. ಆದರೆ, ಆನ್‍ಲೈನ್ ಗೇಮ್ಸ್ ಮತ್ತು ಬೆಟ್ಟಿಂಗ್ ನಿಷೇಧಕ್ಕೆ ಸಂಬಂಧಿಸಿದ ನಿಯಮಗಳು ಸಂವಿಧಾನ ಬಾಹಿರ ಮತ್ತು ಕ್ರಮಬದ್ಧವಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಆಟದ ಫಲಿತಾಂಶದ ಬಗ್ಗೆ ತಿಳಿಯದಿರುವಾಗ ಆಟದ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟುವುದು ಅದು ಆಯ್ಕೆಯೋ ಅಥವಾ ಕೌಶಲ್ಯವೋ. ಅದು ಜೂಜಿಗೆ ಸಮನಾಗಿರುತ್ತದೆ ಎಂದು ವಾದಿಸಿದ್ದರು.
ಬಾಜಿ ಅಥವಾ ಬೆಟ್ಟಿಂಗ್‍ಅನ್ನು ಸರಳ ಭಾಷೆಯಲ್ಲಿ ಹೇಳುವುದಾದರೆ ಒಬ್ಬರಿಂದ ಹಣ ಸಂಗ್ರಹಿಸಿ ಹಣದ ರೂಪದಲ್ಲಿ ಬಹುಮಾನದ ಮೊತ್ತ ಹಂಚಿಕೆ ಮಾಡುವುದಾಗಿದೆ. ಮುಂದೆ ಹೊರಬರಬಹುದಾದ ಫಲಿತಾಂಶದ ಬಗ್ಗೆ ತಿಳಿಯದೆ ತಮ್ಮ ಹಣ ಅಥವಾ ಇನ್ನಾವುದರ ಮೇಲೆ ರಿಸ್ಕ್ ತೆಗೆದುಕೊಳ್ಳುವುದು ಬೆಟ್ಟಿಂಗ್‍ಗೆ ಸಮನಾಗಿರುತ್ತದೆ. ಗೊತ್ತಿಲ್ಲದ ಫಲಿತಾಂಶ ಆಯ್ಕೆಯ ಆಟ ಕೌಶಲ್ಯದ ಆಟವಾಗಿರಬಹುದು ಎಂದು ಹೇಳಿದ್ದರು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಆನ್‍ಲೈನ್ ಗೇಮ್‍ಗಳನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವಿಲ್ಲ. ಗೇಮ್‍ಗಳಿಗೂ, ಸ್ಕಿಲ್‍ಗೂ ವ್ಯತ್ಯಾಸವಿದೆ. ಆದರೆ, ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡು ನಿಷೇಧಿಸಿದೆ. ಈ ಕಾನೂನಿನಿಂದ ನಮ್ಮ ರಾಜ್ಯವು ಆದಾಯ ಮತ್ತು ಉದ್ಯೋಗ ನಷ್ಟ ಅನುಭವಿಸಲಿದೆ. ರಾಜ್ಯ ಸರ್ಕಾರದ ಕಾಯ್ದೆಯು 19(1)(ಜಿ) ಅಡಿ ನಮ್ಮ ಹಕ್ಕುಗಳನ್ನು ಕಸಿಯಲಿದೆ ಎಂದು ಮಂಡಿಸಿದ್ದರು.
