ಬೆಂಗಳೂರು,ಜ.21- ಈ ತಿಂಗಳ ಕೊನೆಯ ವಾರ ಹಾಗೂ ಫೆಬ್ರವರಿಯ ಮೊದಲ ವಾರದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಮತ್ತಷ್ಟು ಉಲ್ಭಣಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರು ನೀಡಿರುವ ವರದಿಯಂತೆ ಜನವರಿ ಕೊನೆ ವಾರ ಹಾಗೂ ಫೆಬ್ರವರಿಯ ಮೊದಲ ವಾರದಲ್ಲಿಒಂದು ಲಕ್ಷಕ್ಕೂ ಅಕ ಸೋಂಕು ಪತ್ತೆಯಾಗುವ ಸಂಭವವಿದ್ದು, ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.
ವಾರಾಂತ್ಯದ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ವಿಸುವುದರಿಂದ ಸೋಂಕಿನ ಪ್ರಮಾಣ ಎಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ ಎಂಬುದನ್ನು ತಜ್ಞರು ವೈಜ್ಞಾನಿಕ ತಳಹದಿಯ ಮೇಲೆ ಸರ್ಕಾರಕ್ಕೆ ವರದಿ ನೀಡುತ್ತಾರೆ. ನಾವು ಅದರ ಆಧಾರದ ಮೇಲೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಯಾರೊಬ್ಬರಿಗೂ ತೊಂದರೆ ಕೊಟ್ಟು ಲಾಕ್‍ಡೌನ್ ಜಾರಿಮಾಡಬೇಕಾದ ಅಗತ್ಯ ಸರ್ಕಾರಕ್ಕಿಲ್ಲ. ಜನರ ಹಿತ ಕಾಪಾಡುವುದು ಸರ್ಕಾರದ ಮುಖ್ಯ ಉದ್ದೇಶ. ಸಾಂಕ್ರಾಮಿಕ ರೋಗಗಳು ಬಂದಾಗ ಅನಿವಾರ್ಯವಾಗಿ ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ಸಾರ್ವಜನಿಕರು ಸಹಕಾರ ಕೊಡಬೇಕೆಂದು ಅವರು ಮನವಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲವನ್ನು ಅಳೆದು ತೂಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಾಲ ಕಾಲಕ್ಕೆ ತಾಂತ್ರಿಕ ಸಲಹಾ ಸಮಿತಿ, ತಜ್ಞರು, ವೈದ್ಯರು ನೀಡುವ ಶಿಫಾರಸುಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ತಿಳಿಸಿದರು.
ಜೀವ ಮತ್ತು ಜೀವನ ಎರಡನ್ನೂ ಕಾಪಾಡುವುದು ಸರ್ಕಾರದ ಕರ್ತವ್ಯ. ಜನ ಸಾಮಾನ್ಯರಿಗೆ ಹೊರೆಯಾಗದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜನಸಾಮಾನ್ಯರ ಅಭಿಪ್ರಾಯವೇ ಸರ್ಕಾರದ ತೀರ್ಮಾನವಾಗಲಿದೆ. ಯಾರಿಗೂ ಕೂಡ ಆತಂಕ ಬೇಡ ಎಂದು ಅಭಯ ನೀಡಿದರು.
ಶುಕ್ರವಾರ ಜನತೆಗೆ ಶುಭ ಸುದ್ದಿಯಾಗಲಿದೆಯೇ ಎಂಬ ಪ್ರಶ್ನೆಗೆ ಶುಕ್ರವಾರ ಯಾವಾಗಲೂ ಶುಭ ದಿನ. ಇಂದೂ ಕೂಡ ಶುಭ ಸುದ್ದಿ ಸಿಗಲಿದೆ ಎಂದು ಸುಧಾಕರ್ ಹಾಸ್ಯ ಚಟಾಕಿ ಹಾರಿಸಿದರು.
