ಬೆಂಗಳೂರು,ಫೆ.16- ಹಿಜಾಬ್ ಸಂಬಂಧ ಹೈಕೋರ್ಟ್ ಆದೇಶ ಪಾಲಿಸಿ ಇಲ್ಲವೆ ಶಿಸ್ತುಕ್ರಮ ಎದುಸಬೇಕಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಖಡಕ್ ಸಂದೇಶ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಯಾರದೋ ಚಿತಾವಣೆಯಿಂದ ವಿದ್ಯಾರ್ಥಿನಿಯರು ವಿವಾದ ಮಾಡುತ್ತಿದ್ದಾರೆ. ಘಟನೆ ಸಂಬಂಧ ಇದುವರೆಗೂ ಮೃದುಧೋರಣೆ ತಳೆಯಲಾಗಿತ್ತು.
ಇನ್ನು ಮುಂದೆ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಜರುಗಿಸುತ್ತೇವೆ ಎಂದು ಗೃಹ ಸಚಿವರು ಕಠಿಣ ಎಚ್ಚರಿಕೆ ನೀಡಿದರು. ಕೋರ್ಟ್ ಆದೇಶ ಮತ್ತು ಸಂವಿಧಾನವನ್ನು ಮಾನ್ಯ ಮಾಡುವುದು ದೇಶದ ಎಲ್ಲ ನಾಗರಿಕರ ಕರ್ತವ್ಯ. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲೇಬೇಕು. ಯಾವುದೇ ಕಾರಣಕ್ಕೂ ಆದೇಶ ಉಲ್ಲಂಘನೆ ಸಹಿಸುವುದಿಲ್ಲ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆಯಿಂದ ಶಾಲಾ-ಕಾಲೇಜು ಆರಂಭವಾಗಿವೆ. ಎಲ್ಲೂ ಗೊಂದಲ ಇಲ್ಲ ಎಂದು ಹೇಳಿದ ಅವರು, ಇಂದು ಬೆಳಗ್ಗೆ ಮೂರ್ನಾಲ್ಕು ಕಡೆ ಗೊಂದಲವಾಗಿತ್ತು. ಸ್ಥಳೀಯ ಆಡಳಿತ, ಜಿಲ್ಲಾಡಳಿತ, ಕಾಲೇಜು ಆಡಳಿತ ಮಂಡಳಿ ಮನವರಿಕೆ ಮಾಡಿಕೊಟ್ಟು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಹೀಗಾಗಿ ಎಲ್ಲೂ ಗಲಾಟೆಯಾಗಿಲ್ಲ, ಗಲಾಟೆಗೆ ಆಸ್ಪದವನ್ನೂ ನೀಡುವುದಿಲ್ಲ ಎಂದರು.
ಶಿವಮೊಗ್ಗ ಕಾಲೇಜಿನಲ್ಲಿ ಬೆಳಗ್ಗೆ ಗೊಂದಲ ಉಂಟಾಗಿತ್ತು. ಕಾಲೇಜು ಆಡಳಿತ ಮಂಡಳಿಯವರು ಪರಿಸ್ಥಿತಿಯನ್ನು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಪರಿಸ್ಥಿತಿ ತಿಳಿಗೊಳಿಸಿರುವುದಾಗಿ ಮಾಹಿತಿ ನೀಡಿರುವುದಾಗಿ ಹೇಳಿದರು.
ಇನ್ನುಳಿದಂತೆ ರಾಜ್ಯದ ಬಹುತೇಕ ಕಡೆ ಕಾಲೇಜುಗಳಲ್ಲಿ ಎಂದಿನಂತೆ ತರಗತಿಗಳು ಪ್ರಾರಂಭವಾಗಿವೆ. ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳ ಮನವೊಲಿಸಿ ಕಾಲೇಜಿಗೆ ಕಳುಹಿಸುತ್ತಿದ್ದಾರೆ. ಎಲ್ಲೂ ಯಾವುದೇ ಪ್ರತಿರೋಧ ವ್ಯಕ್ತವಾಗಿಲ್ಲ.
