ಬೆಂಗಳೂರು,ಫೆ.9- ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ನಡುವೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸಚಿವರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದರು. ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಮುಖ್ಯಮಂತ್ರಿಗಳ ಪ್ರಧಾನಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಸೇರಿದಂತೆ ಮತ್ತಿತರರ ಜತೆ ಔಪಚಾರಿಕ ಸಭೆ ನಡೆಸಿದರು.
ನಿನ್ನೆ ರಾಜ್ಯದ 18 ಜಿಲ್ಲೆಗಳ 55 ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವ ಕುರಿತು ದೊಡ್ಡ ಸಂಘರ್ಷವೇ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಇಂದಿನಿಂದ ಅನ್ವಯವಾಗುವಂತೆ ಮೂರು ದಿನ ರಜೆ ಘೋಷಿಸಲಾಗಿದೆ.
ನವದೆಹಲಿಯಿಂದ ರಾತ್ರಿ ತಡವಾಗಿ ಬೆಂಗಳೂರಿಗೆ ಆಗಮಿಸಿದ ಸಿಎಂ ಬೊಮ್ಮಾಯಿ ಅವರಿಗೆ ಇಂದು ಸಚಿವರು ಮತ್ತು ಅಧಿಕಾರಿಗಳು ಘಟನೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಕೆಲವು ರಾಜಕೀಯ ಪಕ್ಷಗಳ ಮುಖಂಡರ ಹೇಳಿಕೆ ಹಾಗೂ ಕೆಲವು ಸಂಘಟನೆಗಳು ಕೂಡ ಕುಮ್ಮಕ್ಕು ನೀಡಿದ್ದರಿಂದ ವಿದ್ಯಾರ್ಥಿಗಳು ಉದ್ವಿಗ್ನಗೊಂಡು ದಾಂಧಲೆ ನಡೆಸಿದ್ದಾರೆ. ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆಯಲ್ಲಿ ಮಾತ್ರ ಗಲಭೆ ನಡೆದಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈಗ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದು ಗೃಹ ಸಚಿವರು ಸಿಎಂಗೆ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದಿಂದ ಆರಂಭವಾಗಿ ದಕ್ಷಿಣ ಕನ್ನಡ, ಮಡಿಕೇರಿ, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಒಟ್ಟು 18 ಜಿಲ್ಲೆಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಸಮವಸ್ತ್ರ ಪಾಲನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳಿದರೂ ಕೆಲವರು ಧರ್ಮದ ಆಚರಣೆ ಎಂದು ಹೇಳಿಕೊಂಡು ತರಗತಿಯೊಳಗೆ ಹಿಜಾಬ್ ಧರಿಸಿಕೊಂಡು ಬರುತ್ತೇವೆ ಎನ್ನುತ್ತಾರೆ.
ಇದಕ್ಕೆ ಪ್ರತಿಯಾಗಿ ಮತ್ತೊಂದು ಸಮುದಾಯದ ವಿದ್ಯಾರ್ಥಿಗಳು ನಾವೂ ಕೂಡ ಕೇಸರಿ ಶಾಲು ಹಾಕಿಕೊಂಡೇ ತರಗತಿಗೆ ಬರುತ್ತೇವೆ ಎಂದು ಪಟ್ಟುಹಿಡಿದಿದ್ದಾರೆ. ಎರಡೂ ಕಡೆ ಮಾತಿನ ಚಕಮಕಿ ನಡೆದು ಸಂಘರ್ಷ ಉಂಟಾಗಿತ್ತು. ಪೊಲೀಸರು ಹಾಗೂ ಆಡಳಿತ ಮಂಡಳಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ನಿನ್ನೆ ಹಾಗೂ ಇಂದಿನ ವಾತಾವರಣಕ್ಕೂ ಸಾಕಷ್ಟು ಸುಧಾರಣೆಯಾಗಿದೆ ಎಂದು ಗೃಹ ಸಚಿವರು ಸಿಎಂಗೆ ವಿವರಿಸಿದ್ದಾರೆ.
ಸಚಿವ ನಾಗೇಶ್ ಕೂಡ ಪ್ರಸ್ತುತ ಘಟನೆಯ ಬಗ್ಗೆ ಸಿಎಂಗೆ ಸಂಪೂರ್ಣವಾದ ವಿವರ ನೀಡಿದರು. ಕೆಲವು ಕಡೆ ಸಮವಸ್ತ್ರ ಧರಿಸಿಯೇ ಬರುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಸಂಘಟನೆಗಳ ಕೈವಾಡವೂ ಇದೆ. ಶಾಲಾ ಆಡಳಿತ ಮಂಡಳಿಯವರು ಸಮವಸ್ತ್ರ ಧರಿಸಿಕೊಂಡು ಬರುವಂತೆ ಮನವೊಲಿಸಿದರೂ ಕೇಳುತ್ತಿಲ್ಲ. ಇದರಿಂದ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಹೇಳಿದ್ದಾರೆ.
ಇನ್ನು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಇಂದು ಹೈಕೋರ್ಟ್‍ನಲ್ಲಿ ಅರ್ಜಿ ವಿಚಾರಣೆ ಮುಂದುವರೆಯುತ್ತಿರುವುದರ ಬಗ್ಗೆ ಮಾಹಿತಿ ನೀಡಿದರು.
ಸರ್ಕಾರದ ನಿಲುವು ಬೇರೆ ಬೇರೆ ರಾಜ್ಯಗಳ ನ್ಯಾಯಾಲಯಗಳು ನೀಡಿರುವ ತೀರ್ಪುಗಳ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ. ಉಳಿದಂತೆ ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಆಯುಕ್ತ ಕಮಲ್‍ಪಂತ್ ಬಳಿ ಸಿಎಂ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
