ಪ್ರಚೋದನಾಕಾರಿ ಹೇಳಿಕೆ ನೀಡದೆ ಶಾಂತಿ ಕಾಪಾಡಿ : ಸಿಎಂ ಮನವಿ

Social Share

ಬೆಂಗಳೂರು,ಫೆ.10- ಶಾಲಾಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಧರಿಸುವ ಕುರಿತು ಉಂಟಾಗಿರುವ ವಿವಾದದ ಬಗ್ಗೆ ಇನ್ನು ಮುಂದೆ ಯಾರೊಬ್ಬರು ಪ್ರಚೋದನಕಾರಿ ಹೇಳಿಕೆ ನೀಡದೆ ಶಾಂತಿ-ಸೌಹಾರ್ದತೆ ಕಾಪಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಈಗಾಗಲೇ ಪರವಿರೋಧವಾಗಿ ಎಲ್ಲರೂ ಹೇಳಿಕೆ ಕೊಟ್ಟಿದ್ದರಿಂದ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇನ್ನು ಮುಂದಾದರೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ವಿದ್ಯಾರ್ಥಿಗಳ ನಡುವೆ ಸಾಮರಸ್ಯ ಹಾಳು ಮಾಡುವುದು ಬೇಡ. ನಾವೆಲ್ಲರೂ ಶಾಂತಿ ಸೌಹಾರ್ದತೆ ಕಾಪಾಡೋಣ ಎಂದರು.
ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಿಸ್ತೃತ ಪೀಠ ಇದರ ಬಗ್ಗೆ ವಾದ-ವಿವಾದವನ್ನು ಆಲಿಸಿ ತೀರ್ಪು ನೀಡಲಿದೆ. ಅಲ್ಲಿಯವರೆಗೂ ನಾವು ಶಾಂತಿಯಿಂದ ಇರೋಣ ಎಂದು ಸಲಹೆ ಮಾಡಿದರು.
ನ್ಯಾಯಾಲಯ ಏನು ತೀರ್ಪು ಕೊಡುತ್ತದೆಯೋ ಗೊತ್ತಿಲ್ಲ. ಅಂತಿಮವಾಗಿ ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ತಲೆ ಬಾಗಲೇಬೇಕು.
ಅನಗತ್ಯವಾಗಿ ಹೇಳಿಕೆ ಕೊಡುವುದರಿಂದ ಸಮುದಾಯಗಳಲ್ಲಿ ಗೊಂದಲ ಮೂಡುತ್ತದೆ ಎಂದು ತಿಳಿಸಿದರು. ಪ್ರಸ್ತುತ ರಾಜ್ಯದಲ್ಲಿ ನಡೆದಿರುವ ಈ ಗಲಭೆಯ ಹಿಂದೆ ಕೆಲವು ಕಾಣದ ಶಕ್ತಿಗಳ ಕೈವಾಡವಿದೆ. ಹೊರಗಿನವರು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಸಂಘಟನೆಗಳ ಮುಖಂಡರಾಗಲಿ ಅಥವಾ ವಿದ್ಯಾರ್ಥಿ ಸಂಘಟನೆಗಳು ಇಂತಹ ಪ್ರಚೋದನೆಗೆ ಒಳಗಾಗಬಾರದು. ಪ್ರತಿಯೊಬ್ಬರು ಸಂವೇದನಾಶೀಲರಾಗಿ ವರ್ತಿಸಬೇಕೆಂದು ಕಿವಿಮಾತು ಹೇಳಿದರು.
ಶಾಲೆ-ಕಾಲೇಜುಗಳು ಸರಸ್ವತಿಯ ದೇಗುಲಗಳು. ಇಲ್ಲಿ ಜಾತಿ-ಧರ್ಮಗಳ ವಿಷ ಬೀಜ ಬಿತ್ತುವುದು ಯಾರಿಗೂ ಶೋಭೆ ತರುವುದಿಲ್ಲ. ವಿದ್ಯಾರ್ಥಿಗಳಲ್ಲಿ ನಾವು ಏಕತಾ ಭಾವ ಮೂಡಿಸಬೇಕೆ ವಿನಃ ವಿಷ ಬೀಜ ಬಿತ್ತುವುದು ಸರಿಯಲ್ಲ ಎಂದರು. ಕಾನೂನು ಸುವ್ಯಸ್ಥೆಗೆ ಧಕ್ಕೆ ತರದಂತೆ ನೋಡಿಕೊಳ್ಳುವುದು ಎಲ್ಲ ಸಂಘಟನೆಗಳ ಕರ್ತವ್ಯವಾಗಿದೆ. ನ್ಯಾಯಾಲಯದ ತೀರ್ಪಿಗಾಗಿ ನಾವು ಕಾಯಬೇಕು. ಅಂತಿಮವಾಗಿ ಅವರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದರು.
ಈ ವಿಚಾರದಲ್ಲಿ ನಮ್ಮಷ್ಟಕ್ಕೆ ನಾವೇ ನಿಯಂತ್ರಣ ಹಾಕಿಕೊಳ್ಳುವುದು ಒಳ್ಳೆಯದು ಎಂದರು. ಇಂದು ಸಂಜೆ ಶಿಕ್ಷಣ ಇಲಾಖೆ ಸಚಿವರು, ಗೃಹ ಸಚಿವರು ಮತ್ತು ಅಕಾರಿಗಳೊಂದಿಗೆ ಚರ್ಚಿಸಿ ಇಲ್ಲಿವರೆಗೂ ಯಾವೆಲ್ಲ ಬೆಳವಣಿಗೆಗಳಾಗಿವೆ ಎಲ್ಲವನ್ನೂ ಪರಿಶೀಲಿಸಿ, ಶಾಲಾಕಾಲೇಜುಗಳಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸಲು ಏ ನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೊ ಅದರ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.

Articles You Might Like

Share This Article