ಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳ ಕೈವಾಡವಿದೆ : ಆರಗ ಜ್ಞಾನೇಂದ್ರ

Social Share

ತೀರ್ಥಹಳ್ಳಿ,ಫೆ.7- ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಹಿಜಾಬ್ ಪ್ರಕರಣದಲ್ಲಿ ಕೆಲವು ಕಾಣದ ದುಷ್ಟಶಕ್ತಿಗಳ ಕೈವಾಡವಿದ್ದು, ಸರ್ಕಾರ ಇದರ ತನಿಖೆ ನಡೆಸುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇಬ್ಬರು ತಲ್ವಾರ್ ಹಿಡಿದುಕೊಂಡು ಸ್ಥಳಕ್ಕೆ ಬಂದಿದ್ದರು ಎಂದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಯಾರು ಕೂಡ ಇದನ್ನು ಉಲ್ಲಂಘನೆ ಮಾಡಬಾರದು. ಇಷ್ಟು ದೊಡ್ಡ ಮಟ್ಟದಲ್ಲಿ ರಾದ್ದಾಂತ ಸೃಷ್ಟಿಯಾಗಿದೆ ಎಂದರೆ ಇದರ ಹಿಂದೆ ಕಾಣದ ಕೈಗಳ ಕುಮ್ಮಕ್ಕಿದೆ ಎಂದು ದೂರಿದರು. ಕೆಲವರು ಪರಿಸ್ಥಿತಿಯ ದುರ್ಲಾಭ ಪಡೆಯಲು ಮುಂದಾಗಿದ್ದಾರೆ. ಇಂತಹ ಪ್ರಕರಣಗಳು ನಡೆದಾಗ ಕಾಣದ ಶಕ್ತಿಯೊಂದು ಕೆಲಸ ಮಾಡುತ್ತದೆ. ಹೀಗಾಗಿ ತನಿಖೆ ನಡೆಸಲು ಸೂಚಿಸಿದ್ದೇನೆ ಎಂದು ಹೇಳಿದರು.
ವಿದ್ಯಾರ್ಥಿಗಳು ಯಾವುದೇ ಸಂಘಟನೆಗಳು, ಮುಖಂಡರ ಪ್ರಚೋದನೆಗೆ ಒಳಗಾಗಬಾರದು. ಹಿಜಾಬ್ ಇಲ್ಲವೇ ಕೇಸರಿ ಧರಿಸಲು ಅವಕಾಶವಿಲ್ಲ. ಸಮವಸ್ತ್ರವನ್ನೇ ಧರಿಸಿಕೊಂಡು ಬರಬೇಕು. ಇದರಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು. ಸರ್ಕಾರ ಪ್ರತಿಯೊಂದನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುತ್ತದೆ. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಕೂಡ ಅವಕಾಶ ಕೊಡುವುದಿಲ್ಲ. ಹದ್ದುಮೀರಿ ವರ್ತನೆ ಮಾಡಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಪರ-ವಿರೋಧಕ್ಕೆ ಅವಕಾಶವಿಲ್ಲದೆ ಸುಲಲಿತವಾಗಿ ಶಿಕ್ಷಣ ಚಟುವಟಿಕೆಗಳು ನಡೆಯಬೇಕು. ಅಲ್ಲಿ ಜಾತಿ, ಧರ್ಮ, ಹಿಜಾಬ್, ಕೇಸರಿ ಯಾವುದಕ್ಕೂ ಅವಕಾಶವಿರುವುದಿಲ್ಲ. ಆಯಾ ಶಾಲಾಕಾಲೇಜುಗಳು ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರವನ್ನೇ ಧರಿಸಬೇಕೆಂದು ಸೂಚಿಸಿದರು.
ವಿದ್ಯಾರ್ಥಿಗಳು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರಲ್ಲೂ ಸಮಾನತೆ ಕಾಪಾಡಬೇಕೆಂಬ ಕಾರಣಕ್ಕಾಗಿ ನಾವು ಸಮವಸ್ತ್ರ ನೀತಿಯನ್ನು ಜಾರಿ ಮಾಡಿದ್ದೇವೆ. ಇದನ್ನು ಪಾಲನೆ ಮಾಡುವುದು ವಿದ್ಯಾರ್ಥಿಗಳ ಕರ್ತವ್ಯ. ನಾನು ಏನು ಬೇಕಾದರೂ ಮಾಡುತ್ತೇನೆ ಎಂಬ ಉದ್ದಟತನ ಮಾಡಬಾರದು ಎಂದು ಮನವಿ ಮಾಡಿದರು.
ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜ್ಯದ ಎಲ್ಲ ಶಾಲೆಗಳಿಗೆ ನಾವು ಸೂಕ್ತ ರಕ್ಷಣೆಯನ್ನು ಕೊಟ್ಟಿದ್ದೇವೆ. ಅಹಿತಕರ ಘಟನೆಗೆ ಅವಕಾಶ ಕೊಡುವುದಿಲ್ಲ ಎಂದರು.

Articles You Might Like

Share This Article