ನವದೆಹಲಿ,ಫೆ.7-ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಕುರಿತಾಗಿ ಹೈಕೋರ್ಟ್ ನೀಡುವ ತೀರ್ಪಿನ ತನಕ ವಿದ್ಯಾರ್ಥಿಗಳು ಶಾಂತಿ ರೀತಿಯಿಂದ ವರ್ತಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾನು ಹೆಚ್ಚು ಪ್ರತಿಕ್ರಿಯಿಸಲಾರೆ. ಅಂತಿಮವಾ ನ್ಯಾಯಾಲಯ ನೀಡುವ ತೀರ್ಪಿಗೆ ಸರ್ಕಾರ ಬದ್ದವಾಗಿರುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರಚೋದನೆಗೆ ಒಳಗಾಗದೆ ಸಂಯಮವನ್ನು ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಶಾಲಾಕಾಲೇಜುಗಳ ಬಗ್ಗೆ ಗೊಂದಲ ಸೃಷ್ಟಿಸಿ ಬೇರೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಕೊಡಬೇಡಿ ಎಂದು ಕಿವಿಮಾತು ಹೇಳಿದರು.ಹಿಜಾಬ್ ಧರಿಸುವ ಕುರಿತಂತೆ ದೇಶಾದ್ಯಂತ ಚರ್ಚೆಯಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ನ್ಯಾಯಾಲಯ ಇದರ ಬಗ್ಗೆ ತೀರ್ಪನ್ನು ಕೂಡ ಕೊಟ್ಟಿದೆ. ಕೆಲವು ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪ್ರಾಯಶಃ ಎರಡುಮೂರು ದಿನದೊಳಗೆ ತೀರ್ಪು ಬರಬಹುದು. ಅಲ್ಲಿಯವರೆಗೆ ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡಿದರು.
ಶಾಲಾಕಾಲೇಜುಗಳಲ್ಲಿ ಸಮವಸ್ತ್ರ ಕುರಿತಾಗಿ ರಾಜ್ಯ ಸರ್ಕಾರ ಮೂರು ದಿನಗಳ ಹಿಂದೆಯಷ್ಟೇ ಅಸೂಚನೆಯನ್ನು ಸಹ ಹೊರಡಿಸಿದೆ. ಆಡಳಿತ ಮಂಡಳಿಯವರು ಹಾಗೂ ಎಸ್‍ಡಿಎಂಸಿಯವರು ತಮ್ಮ ಕಾಲೇಜು ಅನುಗುಣವಾಗಿ ಸಮವಸ್ತ್ರ ಬಗ್ಗೆ ತೀರ್ಮಾನಿಸುತ್ತಾರೆ ಎಂದರು.
# ರಾಜೀ ಇಲ್ಲ:
ರಾಜ್ಯದ ನೆಲ-ಜಲ ಸೇರಿದಂತೆ ಯಾವುದೇ ವಿಷಯದಲ್ಲೂ ನಮ್ಮ ಸರ್ಕಾರ ರಾಜೀಯಾಗುವುದಿಲ್ಲ. ರಾಜ್ಯದ ಹಿತವನ್ನು ಬಲಿಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ನದಿನೀರು ಜೋಡಣೆ ಕುರಿತಂತೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ದೇಶದ ಒಟ್ಟು ಐದು ನದಿಗಳನ್ನು ಜೋಡಣೆ ಮಾಡುವುದಾಗಿ ಪ್ರಸ್ತಾಪಿಸಲಾಗಿದೆ. ಇದರಿಂದ ರಾಜ್ಯಕ್ಕೆ ಎಷ್ಟು ಅನುಕೂಲವಾಗಲಿದೆ ಎಂಬುದನ್ನು ಕಾದು ನೋಡಬೇಕು. ಎಂದು ತಿಳಿಸಿದರು.
ವಾಸ್ತವವಾಗಿ ಅಂತಾರಾಜ್ಯ ನದಿ ನೀರು ಜೋಡಣೆಯನ್ನು ಪ್ರಸ್ತಾಪ ಮಾಡಿದ್ದೇ ಮೊದಲ ಬಾರಿಗೆ ನಮ್ಮ ಸರ್ಕಾರ. ಕಾವೇರಿ, ಕೃಷ್ಣಾ, ಗಂಗಾ ಸೇರಿದಂತೆ ಪ್ರಮುಖ ನದಿಗಳನ್ನು ಜೋಡಣೆ ಮಾಡುವುದರಿಂದ ಎಲ್ಲ ರಾಜ್ಯಗಳಿಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ವೇಳೆ ಚರ್ಚಿಸಲಾಗುವುದು. ಕಾವೇರಿ ಮತ್ತು ಕೃಷ್ಣ ಕರ್ನಾಟಕದ ಜೀವನದಿಗಳು. ಯಾವುದೇ ಕಾರಣಕ್ಕೂ ಅದನ್ನು ಬಲಿ ಕೊಡುವ ಪ್ರಸ್ತಾವನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
ಸಂಸದರನ್ನು ಭೇಟಿಯಾಗಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಕೇಂದ್ರದ ಬಜೆಟ್ ಮಂಡನೆಯಾದ ವೇಳೆ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ ಮಾಡುವುದು ವಾಡಿಕೆ.
ಸಚಿವ ಸಂಪುಟ ವಿಸ್ತರಣೆ ಇಲ್ಲವೆ ಪುನಾರಚನೆ ಬಗ್ಗೆ ವರಿಷ್ಠರು ಭೇಟಿಯಾದಾಗ ಚರ್ಚೆ ಮಾಡಲಾಗುವುದು. ಅದನ್ನು ಹಾದಿಬೀದಿಯಲ್ಲಿ ಚರ್ಚೆ ಮಾಡುವುದಿಲ್ಲ. ಈಗಾಗಲೇ ನಾನು ಈ ಬಗ್ಗೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿರುವುದರಿಂದ ಮತ್ತೆ ಅದೇ ವಿಷಯವನ್ನು ಮಾತನಾಡಲು ಇಷ್ಟವಿಲ್ಲ ಎಂದು ಹೇಳಿದರು.
