ನವದೆಹಲಿ,ಫೆ.5-ಕರ್ನಾಟಕದಲ್ಲಿ ಭಾರೀ ವಿವಾದದ ಕಿಡಿ ಹೊತ್ತಿಸಿರುವ ವಿದ್ಯಾರ್ಥಿಗಳು ಹಿಜಾಬ್-ಕೇಸರಿ ಶಾಲು ಧರಿಸಿ ಶಾಲೆಗೆ ಬರುತ್ತಿರುವ ಸಂಗತಿ ಇದೀಗ ಸಂಸತ್‍ನಲ್ಲೂ ಪ್ರತಿಧ್ವನಿಸಿದೆ. ಕಾಂಗ್ರೆಸ್, ಡಿಎಂಕೆ, ಎಐಎಂಐಎಂ ಸೇರಿದಂತೆ ವಿವಿಧ ಪಕ್ಷಗಳು ಸಂಸದರು ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವುದನ್ನು ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿದ್ದು, ವಿದ್ಯಾರ್ಥಿಗಳಿಗೆ ಜಾತಿ-ಧರ್ಮ ಯಾವುದೂ ಗೊತ್ತಿರುವುದಿಲ್ಲ. ಕೆಲವರು ಇಲ್ಲಿಯೂ ಕೂಡ ವಿಷದ ಬೀಜ ಬಿತ್ತಿದ್ದಾರೆ. ವಿದ್ಯಾದೇವತೆಯಾದ ಸರಸ್ವತಿ ಅವರಿಗೆ ಬುದ್ದಿ ಕೊಡಲಿ ಎಂದು ಪರೋಕ್ಷವಾಗಿ ಬಿಜೆಪಿ ಕಾಲೆಳೆದಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯ ಶಶಿ ತರೂರ್, ಡಿಎಂಕೆಯ ಡಾ.ಸೆಂಥಿಲ್‍ಕುಮಾರ್, ಎಐಎಂಐಎಂನ ಇಂತಿಯಾಜ್ ಜಲೀಲ್ ಮತ್ತಿತರರು ಸದಸ್ಯರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘನೆ ಮಾಡುತ್ತದೆ ಎಂದು ಕಿಡಿಕಾರಿದರು.
ಕರ್ನಾಟಕದ ಬಿಜೆಪಿ ಸರ್ಕಾರ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರನ್ನು ಕಾಲೇಜಿನ ಒಳಗೆ ಬಿಡದೆ ಗೇಟ್‍ನಲ್ಲಿ ನಿಲ್ಲಿಸಿದೆ. ಇದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದರು ಎಂಬ ಕಾರಣಕ್ಕಾಗಿ ಪ್ರಾಂಶುಪಾಲರು ಕಾಲೇಜಿನ ಗೇಟ್ ಬಳಿಯೇ ನಿಲ್ಲಿಸಿ ಪ್ರವೇಶಕ್ಕೆ ಅವಕಾಶ ಕೊಟ್ಟಿಲ್ಲ. ನಮ್ಮದು ವಿವಿಧ ಧರ್ಮವಾದರೂ ವಿವಿಧೆತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡುಬಂದಿದ್ದೇವೆ. ಮುಸ್ಲಿಮರು ಹಿಜಾಬ್ ಧರಿಸಿದರೆ ಕ್ರಿಶ್ಚಿಯನ್ನರು ಮತ್ತೊಂದು ವಿವಿಧ ಶಿಲುಬೆಯನ್ನು ಧರಿಸುತ್ತಾರೆ.
ಸಿಖ್ಖರ್ ಪೇಟ ಧರಿಸುತ್ತಾರೆ. ನಮ್ಮ ಹಿಂದೂಗಳು ತಿಲಕವನ್ನು ಹಚ್ಚಿಕೊಂಡು ಬರುತ್ತಾರೆ. ನಾಗರಿಕ ಸಮಾಜದಲ್ಲಿ ಇದೆಲ್ಲವೂ ಸರ್ವೇ ಸಾಮಾನ್ಯ. ಕರ್ನಾಟಕ ಸರ್ಕಾರದ ವಿರುದ್ಧ ಕೇಂದ್ರವು ಕಾನೂನು ಕ್ರಮ ಜರುಗಿಸಬೇಕೆಂದು ತಮಿಳುನಾಡಿನ ಡಿಎಂಕೆ ಪಕ್ಷದ ಡಾ.ಸೆಂಥಿಲ್‍ಕುಮಾರ್ ಒತ್ತಾಯಿಸಿದರು.
ಉಡುಪಿಯ ಕುಂದಾಪುರದ ಪದವಿಪೂರ್ವ ಕಾಲೇಜಿನಲ್ಲಿ ಅಲ್ಲಿನ ಪ್ರಾಂಶುಪಾಲ ರುದ್ರೇಗೌಡ ಅವರು ಅಸೂಚನೆಯನ್ನು ಹೊರಡಿಸಿದ್ದಾರೆ. ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಬರಬಾರದು ಎಂದು ಅಸೂಚನೆ ಹೊರಡಿಸಲು ಅವರಿಗೆ ಅಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಶಾಲೆಯ ಆವರಣದಲ್ಲಿ ಹಿಜಾಬ್ ಧರಿಸುವುದನ್ನು ನಿಷೇಸಿದ್ದೇವೆ. ಅದರಿಂದೀಚೆಗೆ ವಿದ್ಯಾರ್ಥಿಗಳು ಯಾವುದೇ ರೀತಿಯ ಬಟ್ಟೆಗಳನ್ನು ಧರಿಸಬಹುದು ಎಂದು ಹೇಳಿದ್ದಾರೆ. ಇದು ಸಂವಿಧಾನದ ಉಲ್ಲಂಘನೆಯಾಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಹೇಳಿದ್ದಾರೆ.
