ಬೆಂಗಳೂರು,ಫೆ.12- ರಾಜ್ಯದಲ್ಲಿ ಕೇಸರಿ ಮತ್ತು ಹಿಜಾಬ್ ನಡುವಿನ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಿರುವ ಕಾರಣ ಸರ್ಕಾರ ಮತ್ತೆ ಪದವಿಪೂರ್ವ ಕಾಲೇಜುಗಳಿಗೆ ನೀಡಿರುವ ರಜೆಯನ್ನು ಫೆ.15ರವರೆಗೆ ವಿಸ್ತರಣೆ ಮಾಡಿದೆ. ಶಾಂತಿ ಮತ್ತು ಸುವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ
ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ರಜೆಯನ್ನು ಘೋಷಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶೇಖರ ಅವರು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ನಿನ್ನೆಯಷ್ಟೇ ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪದವಿಪೂರ್ವ ಕಾಲೇಜುಗಳಿಗೆ ಫೆ.17ರವರೆಗೆ ರಜೆ ನೀಡಿತ್ತು.
ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲುಗಳ ವಿವಾದದಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಘರ್ಷ ಉಂಟಾಗಿತ್ತು. ಕೆಲವು ಕಾಲೇಜುಗಳಲ್ಲಿ ಅಹಿತಕರ ಘಟನೆಯೂ ನಡೆದಿತ್ತು. ಹೀಗಾಗಿ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ಮೂರು ದಿನಗಳಿಂದ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆಯನ್ನು ನೀಡಿತ್ತು.
ಸೋಮವಾರ 10ನೇ ತರಗತಿಗಳು ಮಾತ್ರ ಪ್ರಾರಂಭವಾಗಲಿದ್ದು, ಉಳಿದಂತೆ ಪದವಿ ಹಾಗೂ ಪದವಿರ್ಪೂ ಕಾಲೇಜುಗಳಿಗೆ ನೀಡಿರುವ ರಜೆ ಮುಂದುವರೆಯಲಿದೆ. ನಿನ್ನೆಯಷ್ಟೇ ಜಿಲ್ಲಾಧಿಕಾರಿಗಳು, ಎಸ್‍ಪಿ, ಡಿಡಿಪಿಐ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಸಿಎಂ ಬೊಮ್ಮಾಯಿ ಅವರು, ಸೋಮವಾರದಿಂದ ಪ್ರೌಢಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ವಿದ್ಯಾರ್ಥಿಗಳ ರಕ್ಷಣೆ, ಶಾಲೆಗಳಲ್ಲಿ ಸೌಹಾರ್ದಯುತ ವಾತಾವರಣ ಮೂಡಿಸುವುದು, ಹೈಕೋರ್ಟ್ ವಿಸ್ತೃತ ಪೀಠ ನೀಡಿರುವ ಮಧ್ಯಂತರ ಆದೇಶದಂತೆ ಯಾವುದೇ ವಿದ್ಯಾರ್ಥಿಗಳು ಹಿಜಾಬ್ ಇಲ್ಲವೇ ಕೇಸರಿ ಧರಿಸಿ ಬಂದರೆ ಶಾಲೆಯೊಳಗೆ ಪ್ರವೇಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸೋಮವಾರ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ತ್ರಿಸದಸ್ಯ ಪೀಠ ಹಿಜಾಬ್ ಧರಿಸುವುದನ್ನು ಸರ್ಕಾರ ನಿಷೇಧ ಹೇರಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದುವರೆದ ವಿಚಾರಣೆ ನಡೆಯಲಿದೆ. ಹೈಕೋರ್ಟ್‍ನ ತ್ರಿಸದಸ್ಯ ಪೀಠ ನೀಡಲಿರುವ ಈ ಐತಿಹಾಸಿಕ ತೀರ್ಪನ್ನು ವಿಶ್ವವೇ ಕಾತುರದಿಂದ ನೋಡುತ್ತಿದೆ.
