ನವದೆಹಲಿ, ಫೆ.11- ಹಿಜಾಬ್ ವಿವಾದವನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಹಾಗೂ ದೇಶದ ಇತರ ಭಾಗಗಳಲ್ಲಿ ನಡೆಯುತ್ತಿರುವ ಹಿಜಾಬ್ ಗಲಾಟೆಗೆ ಬಿಜೆಪಿ ನಾಯಕರೇ ಕಾರಣ. ಬೇಜವಾಬ್ದಾರಿಯಿಂದಾಗಿ ರಾಜ್ಯದಲ್ಲಿ ಈ ವಿವಾದ ಸೃಷ್ಟಿಯಾಯಿತು. ಪಂಚರಾಜ್ಯ ಚುನಾವಣೆ ನಡೆಯುತ್ತಿರುವ ವೇಳೆ ಇದರ ಲಾಭ ಪಡೆಯಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್‍ನಲ್ಲಿ ಕಾಂಗ್ರೆಸ್ ಸೇರಿದಂತೆ ಬಹಳಷ್ಟು ವಿರೋಧ ಪಕ್ಷಗಳು ಹಣದುಬ್ಬರ, ನಿರುದ್ಯೋಗ, ರೈತರ ಸಂಕಷ್ಟ, ಜಿಡಿಪಿ ಕುಸಿತ, ರಾಷ್ಟ್ರೀಯ ಭದ್ರತೆ, ಐಕ್ಯತೆ ಕುರಿತಂತೆ ಹಲವಾರು ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಆದರೆ, ಯಾವುದಕ್ಕೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸನ್ನು ಟೀಕೆ ಮಾಡುವ ಮೂಲಕ ವಿಷಯಾಂತರ ಮಾಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಅನುಸರಿಸಿದ ತಂತ್ರವನ್ನೇ ಸಂಸತ್‍ನಲ್ಲೂ ಪಾಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
