ಬೆಂಗಳೂರು,ಫೆ.20- ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಗಳಿಗೆ ಗೈರಾದರೆ ಮತ್ತೆ ಪರೀಕ್ಷೆ ಬರೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ. ಕಳೆದ ಹಲವು ದಿನಗಳಿಂದ ಹಿಜಾಬ್ ವಿವಾದ ಮುಂದುವರೆದಿದ್ದು, ಹಲವೆಡೆ ವಿದ್ಯಾರ್ಥಿನಿಯರು ಹಿಜಾಬ್‍ಗಾಗಿ ಪಟ್ಟು ಹಿಡಿದು ಪ್ರತಿಭಟನೆ ನಡೆಸಿ ಕಾಲೇಜುಗಳಿಗೆ ಗೈರುಹಾಜರಾಗುತ್ತಿದ್ದಾರೆ.
ಈ ನಡುವೆ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಿದ್ದು, ಹಿಜಾಬ್ ಸಂಘರ್ಷದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗದಿದ್ದರೆ ಮತ್ತೆ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿರುವುದರಿಂದ ಹಿಜಾಬ್‍ಗಾಗಿ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ.
ಫೆ.17ರಿಂದ ಪ್ರಾಯೋಗಿಕ ಪರೀಕ್ಷೆಗಳು ಪ್ರಾರಂಭವಾಗಿದ್ದು, ಹಲವು ಜಿಲ್ಲೆಗಳಲ್ಲಿ ನಾಳೆಯಿಂದ ಪರೀಕ್ಷೆ ಆರಂಭವಾಗಲಿದೆ. ಪಿಯು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ಪ್ರಮುಖ ಘಟ್ಟವಾಗಿದೆ. ಈ ಸಂದರ್ಭದಲ್ಲಿ ಹಿಜಾಬ್ ವಿವಾದ ಉಲ್ಬಣಗೊಂಡಿದೆ. ಸರ್ಕಾರದ ಆದೇಶವನ್ನು ಪಾಲನೆ ಮಾಡಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ ಯಾವುದೇ ತೊಂದರೆಯಿಲ್ಲ.
ಆದರೆ ಅದನ್ನು ವಿರೋಧಿಸಿ ಪ್ರತಿಭಟನೆಗಿಳಿದು ಪರೀಕ್ಷೆಗೆ ಗೈರಾದರೆ ಮತ್ತೆ ಪರೀಕ್ಷೆ ಬರೆಯಲು ಯಾವುದೇ ಅವಕಾಶ ನೀಡುವುದಿಲ್ಲ ಎಂದು ಇಲಾಖೆ ಸಂದೇಶ ರವಾನಿಸಿದೆ. ಹಿಜಾಬ್‍ಗಾಗಿ ಪಟ್ಟು ಹಿಡಿದು ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಕಾಲೇಜು ಆಡಳಿತ ಮಂಡಳಿ ಪೊಲೀಸರ ನಡುವೆ ವಾಗ್ವಾದವು ನಡೆದಿತ್ತು.
ಹೈಕೋರ್ಟ್‍ನ ಮಧ್ಯಂತರ ಆದೇಶ ಹಾಗೂ ಸರ್ಕಾರದ ಆದೇಶವನ್ನು ನಾವು ಪಾಲನೆ ಮಾಡಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಟ್ಟರೂ ಹಿಜಾಬ್ ನಮ್ಮ ಹಕ್ಕು, ಶಿಕ್ಷಣವೂ ನಮ್ಮ ಹಕ್ಕು. ಎರಡೂ ಬೇಕೆಂದು ಪಟ್ಟು ಹಿಡಿದು ಹಲವೆಡೆ ಶಾಲಾಕಾಲೇಜುಗಳಿಂದ ವಿದ್ಯಾರ್ಥಿನಿಯರು ವಾಪಸ್ ಹೋಗಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಕಾಲೇಜುಗಳಿಗೆ ರಜೆ ಕೂಡ ಘೋಷಿಸಲಾಯಿತು. ಬಳ್ಳಾರಿ, ಬೆಳಗಾವಿ, ಚಿಕ್ಕಮಗಳೂರು, ಬಿಜಾಪುರ, ಯಾದಗಿರಿ , ಕೋಲಾರ, ಮೈಸೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಕಾಲೇಜುಗಳ ಮುಂದೆ ಹಿಜಾಬ್‍ಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ನಾಳೆಯಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿದ್ದು, ಸರ್ಕಾರದ ಆದೇಶ ಪಾಲನೆ ಮಾಡದಿದ್ದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗುವುದಿಲ್ಲ.
