ಮನೆಗೆ ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುತ್ತಿದೆ ಕಾಂಗ್ರೆಸ್ : ಬಿಜೆಪಿ ವಾಗ್ದಾಳಿ

Social Share

ಬೆಂಗಳೂರು,ಫೆ.8- ಹಿಜಾಬ್-ಕೇಸರಿ ವಿವಾದವನ್ನು ತನ್ನ ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ನೆರೆಮನೆಗೆ ಬೆಂಕಿ ಬಿದ್ದಾಗ ಮೈ ಕಾಯಿಸಿಕೊಳ್ಳುವ ಬುದ್ಧಿ ತೋರುತ್ತಿದೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಹಿಜಾಬ್ ಪ್ರಕರಣದಲ್ಲಿ ಕಾಂಗ್ರೆಸ್‍ನವರ ದುರುದ್ದೇಶ, ಜಾತ್ಯತೀತ ಹೆಸರಿನಲ್ಲಿನ ಅದರ ಮುಖವಾಡ ಎರಡೂ ಕಳಚಿ ಬೀಳುವ ಸಮಯವಿದು ಎಂದು ಎಚ್ಚರಿಸಿದೆ.
ಮುಸ್ಲಿಂ ಮಹಿಳೆಯರ ಹಕ್ಕಿನ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ನಾಯಕರಿಗೆ, ಇದೇ ಮಹಿಳೆಯರು ತ್ರಿವಳಿ ತಲಾಖ್‍ನಿಂದ ಎದುರಿಸುವ ದೌರ್ಜನ್ಯದ ಬಗ್ಗೆ ಏಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದೆ. ರಾಜ್ಯದಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗುವುದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ್ಯವಿದೆ. ಉಡುಪಿ, ಕುಂದಾಪುರದ ವಿದ್ಯಾರ್ಥಿನಿಯರನ್ನು ಈ ವಿವಾದಕ್ಕೆ ಬಳಸಿಕೊಳ್ಳಲಾಗಿದೆ. ಈಗ ರಾಜ್ಯಕ್ಕೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಮೂಲಭೂತವಾದದ ಪ್ರವೇಶ ಎಷ್ಟು ಸರಿ? ಹಿಜಾಬ್ ವಿವಾದ ಸೃಷ್ಟಿಯಾದ ಕೆಲವೇ ದಿನಗಳಲ್ಲಿ ಇದನ್ನು ಅಂತಾರಾಷ್ಟ್ರೀಯ ಸುದ್ದಿಯಾಗಿ ಪ್ರಕಟಿಸಲಾಗಿದೆ. ಭಾರತದಲ್ಲಿ ಧಾರ್ಮಿಕ ಅಸಹನೆ ಇದೆ ಎಂಬ ಸುಳ್ಳು ವಿಚಾರವನ್ನು ಪ್ರತಿಷ್ಠಾಪಿಸುವ ಯೋಜಿತ ಸಂಚು ಇದಲ್ಲವೇ? ಎಂದು ಪ್ರಶ್ನಿಸಿದೆ.
ಈ ಟೂಲ್ ಕಿಟ್‍ನ ಹಿಂದಿರುವ ರಾಷ್ಟ್ರ ವಿರೋಧಿ ಶಕ್ತಿಗಳ ಹೆಸರು ಬಹಿರಂಗವಾಗಲಿ ಎಂದು ಒತ್ತಾಯಿಸಿದೆ. ಹಿಜಾಬ್ ನಮ್ಮ ಮೂಲಭೂತ ಹಕ್ಕು ಎಂದು ವಾದಿಸುತ್ತಿರುವ ಕೆಲವೇ ವಿದ್ಯಾರ್ಥಿಗಳು ಈ ಹಿಂದೆ ಸಮವಸ್ತ್ರದಲ್ಲಿಯೇ ಕಾಲೇಜಿಗೆ ಬರುತ್ತಿದ್ದರು.
ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಗೊಂಡು ಪ್ರಮಾಣವಚನ ಸ್ವೀಕರಿಸುವಾಗ ಹಿಜಾಬ್ ಅಗತ್ಯ ಕಾಣಲಿಲ್ಲ. ಹಾಗಾದರೆ, ಈಗಿನ ಪ್ರತಿಭಟನೆಯ ಹಿಂದಿನ ಉದ್ದೇಶವೇನು? ಎಂದು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಉಡುಪಿ, ಕುಂದಾಪುರಕ್ಕೆ ಸೀಮಿತವಾಗಿದ್ದ ಹಿಜಾಬ್ ವಿವಾದ ಈಗ ರಾಜ್ಯದ ಇತರೆ ಜಿಲ್ಲೆಗಳಿಗೆ ವ್ಯಾಪಿಸಿದೆ. ಕೋರ್ಟ್ ಮೆಟ್ಟಿಲನ್ನೂ ಏರಿದೆ.

Articles You Might Like

Share This Article