ತಾಯಿ-ಅವಳಿ ಶಿಶುಗಳ ಸಾವು ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ

Social Share

ಬೆಂಗಳೂರು,ನ.4- ತುಮಕೂರಿನಲ್ಲಿ ತಾಯಿ ಮತ್ತು ಅವಳಿ ಶಿಶುಗಳ ಸಾವಿನ ಪ್ರಕರಣ ಕುರಿತಂತೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಘಟನೆಯನ್ನು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಈ ಕುರಿತು ತನಿಖೆ ನಡೆಸಲು ಆರೋಗ್ಯ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಇನ್ನೆರಡು ವಾರಗಳಲ್ಲಿ ವರದಿ ನೀಡುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆಗೆ ಇಂದು ತುರ್ತು ಭೇಟಿ ನೀಡಿ, ತುಂಬು ಗರ್ಭಿಣಿ ಮಹಿಳೆ ಹಾಗೂ ಆಕೆಯ ನವಜಾತ ಶಿಶುಗಳ ಮರಣ ಪ್ರಕರಣದ ಕುರಿತು ಮಾಹಿತಿ ಪಡೆಯಲಾಯಿತು. ದುರ್ದೈವವಶಾತ್ ನಡೆದಿರುವ ಈ ಘಟನೆ ನನಗೆ ಅತೀವ ನೋವು ತಂದಿದ್ದು ನನ್ನಲ್ಲಿ ದಿಗ್ಬ್ರಮೆ ಮೂಡಿಸಿದೆ ಎಂದಿದ್ದಾರೆ.

BREAKING : ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ದಾಖಲೆ ಕೇಳುವಂತಿಲ್ಲ

ಮೇಲ್ನೋಟಕ್ಕೆ ಹೆರಿಗೆ ವಾರ್ಡ್‍ನ ಮೂವರು ದಾದಿಯರು ಹಾಗೂ ಕರ್ತವ್ಯ ನಿರತ ವೈದ್ಯರ ಕರ್ತವ್ಯಲೋಪ ಕಂಡುಬಂದಿದ್ದು, ತನಿಖೆಗೆ ಆದೇಶ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಲ್ವರನ್ನೂ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು, ಸಂಕಟವನ್ನು ನಿವಾರಿಸುವುದು ವೈದ್ಯರ, ಶುಶ್ರೂಷಕರ ಮತ್ತು ಇತರೆ ಸಿಬ್ಬಂದಿ ವರ್ಗದವರ ಆದ್ಯಕರ್ತವ್ಯವಾಗಿದೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರೋಗಿಯ ಯಾವುದೇ ದಾಖಲಾತಿಗಳನ್ನು ನೀಡಲು ಒತ್ತಾಯಿಸಬಾರದು ಎಂದು ಈಗಾಗಲೇ ಸರ್ಕಾರದ ಆದೇಶವಿದ್ದು, ಮತ್ತೊಮ್ಮೆ ಈ ಆದೇಶವನ್ನು ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.

ಇದು ಘನಘೋರ : ಸಕಾಲದಲ್ಲಿ ಚಿಕಿತ್ಸೆ ಸಿಗದೇ ತಾಯಿ ಮತ್ತು ಅವಳಿ ನವಜಾತ ಶಿಶುಗಳ ಸಾವು

ತನಿಖೆಯ ವರದಿಯಲ್ಲಿ ಆರೋಪ ಸಾಬೀತಾದರೆ ಅಮಾನತುಗೊಂಡಿರುವ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸುವುದಲ್ಲದೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದು ಕೊಳ್ಳಲಾಗುವುದು. ಈ ರೀತಿಯ ಘಟನೆ ಮತ್ತೆ ಮರುಕಳಿಸದಂತೆ ಮುನ್ನಚ್ಚರಿಕೆ ತೆಗೆದುಕೊಳ್ಳುವಂತೆ ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

# ಗರ್ಭಿಣಿ ಮಹಿಳೆ, ಅವಳಿ ಶಿಶು ಸಾವು, ವೈದ್ಯೆ ಸೇರಿದಂತೆ ನಾಲ್ವರು ಸಸ್ಪೆಂಡ್
ತುಮಕೂರು, ನ.4- ಚಿಕಿತ್ಸೆ ದೊರಕದೆ ಗರ್ಭಿಣಿ ಮಹಿಳೆ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿರುವ ವಿಚಾರಕ್ಕೆ ಸಂಬಂಸಿದಂತೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಸುಧಾಕರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಚಿಕಿತ್ಸೆ ಅಗತ್ಯವಿದ್ದಾಗ, ಯಾವುದೇ ದಾಖಲೆಗಳಿಲ್ಲದೆ ಇದ್ದರೂ ಚಿಕಿತ್ಸೆ ಕೊಡಬೇಕು, ತುರ್ತು ಸಂದರ್ಭದಲ್ಲಿ ಚಿಕಿತ್ಸೆಯೇ ಮುಖ್ಯವಾಗಿದ್ದು, ದಾಖಲೆಗಳ ಅವಶ್ಯಕತೆ ಇಲ್ಲ ಎಂಬ ಸುತ್ತೋಲೆ ಇದ್ದರೂ ಕರ್ತವ್ಯ ಲೋಪ ಮಾಡಿದ ಮೂವರು ಶುಶ್ರೂಷಕಿ ಮತ್ತು ವೈದ್ಯೆಯನ್ನು ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಶೋಚನೀಯ, ಅಮಾನವೀಯ ಘಟನೆ ನಡೆದು ಹೋಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದರೆ ಸೇವೆಯಿಂದ ವಜಾ, ಕ್ರಿಮಿನಲ್ ಮೊಕದ್ದಮೆ ಹೂಡಲು ಸರ್ಕಾರ ನಿರ್ಧಾರ ಮಾಡಿದ್ದು, ಸೇವೆ ಒದಗಿಸುವುದೇ ಇಲಾಖೆಯ ಕರ್ತವ್ಯವಾಗಿದೆ ಎಂದರು.

ಹೆರಿಗೆ ವಾರ್ಡ್‍ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ದಾದಿಯರಾದ ಯಶೋಧಾ, ಸವಿತಾ, ದಿವ್ಯ ಭಾರತಿ, ವೈದ್ಯೆ ಉಷಾ ಕರ್ತವ್ಯ ಲೋಪ ಮಾಡಿದ್ದಾರೆ, ರೋಗಿಯೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ, ಪ್ರಕರಣ ಸಂಬಂಧ ಜಿಲ್ಲಾ ಶಸ್ತ್ರಚಿಕಿತ್ಸಕಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದರು.

ವೈದ್ಯರ ರಕ್ಷಣೆ ಮಾಡಿದ್ದೇವೆ, ಸಿಬ್ಬಂದಿಗೆ ಕಠಿಣ ಕಾನೂನಿನ ನೆರವು ನೀಡಿದ್ದೇವೆ. ಜನರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳದಿದ್ದರೆ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅವೇಶನದಲ್ಲಿ ಮಂಡಿಸುವುದಾಗಿ ತಿಳಿಸಿದರು.

ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಯಾರೇ ಅಕಾರಿ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳುತ್ತೇನೆ. ವರದಿ ಬಂದ ಮೇಲೆ ಅಮಾನತುಗೊಂಡವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು, ಯಾರನ್ನೂ ರಕ್ಷಿಸುವುದಿಲ್ಲ. ಈ ಪ್ರಕರಣ ದೊಡ್ಡ ಪಾಠ ಕಲಿಸಿದೆ. ಆರೋಗ್ಯ ಇಲಾಖೆಯಲ್ಲಿ ಚಿಕಿತ್ಸೆ ಸುಧಾರಿಸಲು ಕ್ರಮ ವಹಿಸಲಾಗುವುದು. ಬಡ-ಮಧ್ಯಮ ವರ್ಗದವರಿಗೆ ನೆರವು ನೀಡುವುದು ಇಲಾಖೆಯ ಧ್ಯೇಯ ಎಂದು ಸ್ಪಷ್ಟಪಡಿಸಿದರು.

ಹೆಣ್ಣು ಮಗುವಿಗೆ ನೆರವು: ಸಾವನ್ನಪ್ಪಿರುವ ಗರ್ಭಿಣಿಯೊಂದಿಗೆ ಐದು ವರ್ಷದ ಮಗು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಆಕೆ ನೆರೆ ಮನೆಯವರೊಂದಿಗೆ ಜಿಲ್ಲಾಸ್ಪತ್ರೆಗೆ ಬುಧವಾರ 9.30ಕ್ಕೆ ಬಂದಾಗ, ಶುಶ್ರೂಷಕಿಯರು ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗಿರುವ ಸಿಸಿಟಿವಿ ದೃಶ್ಯಾವಳಿ ಇದೆ ಎಂದರು.

ಐದು ವರ್ಷದ ಹೆಣ್ಣು ಮಗುವಿಗೆ ಆಧಾರವಿಲ್ಲದಂತಾಗಿದೆ. ಕುಟುಂಬದವರು ಮಗುವಿನ ಆರೈಕೆ ಮಾಡಲು ಬರದಿದ್ದರೆ 18 ವರ್ಷಗಳ ಕಾಲ ಉಚಿತ ಶಿಕ್ಷಣ, ವೈಯಕ್ತಿಕವಾಗಿ ಆಕೆಯ ಹೆಸರಿನಲ್ಲಿ ಹಣ ಠೇವಣಿ, ಸರ್ಕಾರದಿಂದ ಠೇವಣಿ, ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯಬಾರದು ಎಂದರು.

ಪ್ರಕರಣ ಸಂಬಂಧ ಆರೋಗ್ಯ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ನೇಮಕ ಮಾಡಿದ್ದು, ಎರಡು ವಾರದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಬಂದ ನಂತರ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಚಿಂತಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಶಾಸಕ ಜ್ಯೋತಿ ಗಣೇಶ್, ಉಪಮೇಯರ್ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ , ಜಿಪಂ ಸಿಇಒ ಡಾ.ವಿದ್ಯಾಕುಮಾರಿ, ಎಎಸ್‍ಟಿ ಟಿ.ಜೆ.ಉದೇಶ್, ಡಿಎಚ್‍ಒ ಡಾ.ಮಂಜುನಾಥ್, ಡಿ.ಎಸ್.ಡಾ.ವೀಣಾ ಡಿವೈಎಸ್‍ಪಿ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article