ಬೆಂಗಳೂರು,ಆ.6- ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‍ಸೈಟ್‍ನಲ್ಲಿ ಬಳಕೆಯಾಗಿದ್ದ ಹಿಂದಿ ಭಾಷೆಗೆ ಕೊನೆಗೂ ಕೋಕ್ ನೀಡಲಾಗಿದೆ. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಿನ್ನೆ ಬೆಂಗಳೂರಿನಲ್ಲಿ ನಡೆದ ಸಂಕಲ್ಪ್ ಸೇ ಸಿದ್ದಿ ಕಾರ್ಯಕ್ರಮದ ಬ್ಯಾನರ್ ಸಂಪೂರ್ಣ ಹಿಂದಿಮಯವಾಗಿತ್ತು. ಮತ್ತೊಂದೆಡೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವೆಬ್‍ಸೈಟ್‍ನಲ್ಲೂ ಹರ್ ಘರ್ ತಿರಂಗ ಪ್ರಚಾರದ ಕುರಿತು ಹಿಂದಿಯಲ್ಲಿ ಫೋಸ್ಟ್ ಮಾಡಲಾಗಿತ್ತು.
ಇದನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಲ್ಲದೆ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇಂದು ಹಿಂದಿ ಭಾಷೆಯಲ್ಲಿದ್ದ ಹರ್ ಘರ್ ತಿರಂಗ ಫೋಸ್ಟ್‍ನ್ನು ವೆಬ್‍ಸೈಟ್‍ನಿಂದ ತೆಗೆದು ಹಾಕಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಬಿಜೆಪಿ ನಾಯಕರು ತಾವು ಕನ್ನಡಿಗರು ಎಂಬ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು. ನಾವು ಹೇಳಿ ಸ್ವಾಭಿಮಾನ ಬರುವಂತದಲ್ಲ. ಹಿಂದಿ ರಾಷ್ಟ್ರ ಭಾಷೆ ಎಂಬ ಭ್ರಮೆಯಿಂದ ಹೊರಬನ್ನಿ ಎಂದು ಲೇವಡಿ ಮಾಡಿದ್ದಾರೆ.
ನಾನು ಚಾಟಿ ಬೀಸಿದ ನಂತರ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಾಲತಾಣದಲ್ಲಿ ಅನಗತ್ಯವಾಗಿ ತುರುಕಿದ್ದ ಹಿಂದಿ ಫೋಸ್ಟ್‍ನ್ನು ತೆಗೆದು ಹಾಕಿದ್ದಾರೆ ಎಂದು ಹೇಳಿದ್ದಾರೆ.