ಹಿಂದಿ ಹೇರಿಕೆ ವಿರೋಧಿಸಿ ‘ಕರಾಳ ದಿನ’ ಆಚರಿಸಿದ ವಾಟಾಳ್

Social Share

ಬೆಂಗಳೂರು, ಅ.15- ಹಿಂದಿ ಹೇರಿಕೆ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿಂದು ಕರಾಳ ದಿನ ಆಚರಿಸಲಾಯಿತು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಿದೆ. ಹಿಂದಿ ಹೇರಿಕೆ ಕ್ರಮವನ್ನು ಕನ್ನಡಿಗರಾದ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.

ಬ್ಯಾಂಕ್, ರೈಲ್ವೆ, ಅಂಚೆ ಇಲಾಖೆ ಸೇರಿದಂತೆ ಎಲ್ಲ ಕಾರ್ಯಾಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಮತ್ತು ಕನ್ನಡದಲ್ಲೇ ವ್ಯವಹರಿಸುವಂತಾಗಬೇಕು. ಇದಕ್ಕಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದೆ ಮತ್ತು ಹೋರಾಟವನ್ನು ಮುಂದು ವರೆಸುತ್ತದೆ ಎಂದು ಗುಡುಗಿದರು.

ಸಿಬ್ಬಂದಿ ಆಯ್ಕೆ ಆಯೋಗ ನಡೆಸುವ ಪರೀಕ್ಷೆ ಕೂಡ ಕನ್ನಡ ದಲ್ಲಿ ನಡೆಯಬೇಕು ಮತ್ತು ಕನ್ನಡಿಗರಿಗೆ ಉದ್ಯೋಗದ ಆದ್ಯತೆ ನೀಡಬೇಕು. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪರೀಕ್ಷೆಗಳನ್ನು ನಡೆಸಿ ಕನ್ನಡಿಗ ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ಕೂಡ ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.

ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಆಡಳಿತದಲ್ಲಿ, ನ್ಯಾಯಾಲಯದಲ್ಲಿ ಎಲ್ಲ ಕಡೆ ಕನ್ನಡ ಬಳಕೆಯಲ್ಲಿರಬೇಕು. ಕೇಂದ್ರದ ಮಂತ್ರಿ ಬರಲಿ, ವಿದೇಶದ ಮಂತ್ರಿ ಬರಲಿ. ಕಾರ್ಯಕ್ರಮಗಳು ಕನ್ನಡದಲ್ಲೇ ನಡೆಯಬೇಕು. ಕರ್ನಾಟಕದಲ್ಲಿ ರಾಷ್ಟ್ರೀಯ ಪರೀಕ್ಷೆಗಳು ಕನ್ನಡದಲ್ಲಿ ನಡೆಯಬೇಕು ಎಂದು ವಾಟಾಳ್ ಹೇಳಿದರು.

ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಕೇಂದ್ರ ಸ್ವಾಮ್ಯದ ಎಲ್ಲ ಕಡೆ ಕನ್ನಡವೇ ಪ್ರಧಾನವಾಗಿರಬೇಕು. ಗಡಿನಾಡು, ಹೊರನಾಡುಗಳಲ್ಲಿ ಕನ್ನಡ ಮೊಳಗಬೇಕು ಎಂದರು. ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವಂತಹ ಹುನ್ನಾರ ನಡೆಯುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಪ್ರೋತ್ಸಾಹ ನೀಡಿ ಕನ್ನಡವನ್ನು ಉಳಿಸಿ ಬೆಳೆಸುವಂತಹ ಕೆಲಸವಾಗಬೇಕು.

ರಾಜ್ಯಾದ್ಯಂತ ಹಿಂದಿ ವಿರೋಧಿ ಹೋರಾಟ ನಡೆಸಿ ಹಿಂದಿ ಫಲಕಗಳಿಗೆ ಕಪ್ಪು ಮಸಿ ಬಳಿಯುವ ಕೆಲಸವನ್ನು ನಮ್ಮ ಪಕ್ಷದ ವತಿಯಿಂದ ನಡೆಸಲಾಗುವುದು. ಇಂದು ಹಿಂದಿ ವಿರೋಧಿ ಚಳವಳಿ ಹಾಗೂ ಕರಾಳ ದಿನಾಚರಣೆ ಮೂಲಕ ಪ್ರತಿಭಟಿಸಲಾಯಿತು ಎಂದು ಅವರು ಹೇಳಿದರು.

Articles You Might Like

Share This Article