ಸತೀಶ್ ಜಾರಕಿಹೊಳಿ ವಿರುದ್ಧ ಭುಗಿಲೆದ್ದ ಆಕ್ರೋಶ

Social Share

ಬೆಂಗಳೂರು,ನ.9- ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ರಾಜ್ಯಾದ್ಯಂತ ಬೀದಿಗಿಳಿದಿವೆ.

ಹಿಂದೂ ಯುವ ಸೇನೆ, ಬಿಜೆಪಿ ಯುವ ಮೋರ್ಚಾ, ವಿಎಚ್‍ಪಿ ಸೇರಿದಂತೆ ಹಲವಾರು ಹಿಂದೂ ಸಂಘಟನೆಗಳು ಸತೀಶ್ ಜಾರಕಿಹೊಳಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಬುಧವಾರವೂ ಪ್ರತಿಭಟನೆಯನ್ನು ತೀವ್ರಗೊಳಿಸಿವೆ.
ರಾಜಧಾನಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ದಾಣಗೆರೆ, ಮಂಗಳೂರು ಸೇರಿದಂತೆ ಮತ್ತಿತರ ಕಡೆ ಸತೀಶ್ ಜಾರಕಿಹೊಳಿ ವಿರುದ್ಧ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

ಕೆಲವು ಕಡೆ ಸತೀಶ್ ಜಾರಕಿಹೊಳಿಯವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಬಿಜೆಪಿ ತನ್ನ ಸಂಸದರು, ಶಾಸಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದೆ.

ಅಪಪ್ರಚಾರಗಳಿಂದ ನೊಂದಿರುವೆ : ನೋವು ತೋಡಿಕೊಂಡ ರಶ್ಮಿಕ ಮಂದಣ್ಣ

ಭಾಷಣದಲ್ಲಿ ಗಾಂಧಿ ಕುಟುಂಬ ಹೊಂದಿರುವ ಗಾಂಧಿ ಕುಟುಂಬದ ಉಪನಾಮದ ವಿಷಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಿದ್ದ ವಿಚಾರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಯೇಸು ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದ ವಿಷಯ ಪ್ರಸ್ತಾಪಿಸಲು ಸೂಚಿಸಲಾಗಿದೆ.

ಸಭೆ ಮತ್ತು ಭಾಷಣದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬೇಕು ಎಂದು ಬಿಜೆಪಿಯ ಎಲ್ಲ ಜಿಲ್ಲಾ ಘಟಕಗಳಿಗೆ ರಾಜ್ಯ ಘಟಕದಿಂದ ಸೂಚನೆ ರವಾನೆಯಾಗಿದೆ.

ವ್ಯಾಪಕ ಪ್ರತಿಭಟನೆ: ಹಲವು ಸಂಘಟನೆಗಳು, ವೇದಿಕೆಗಳು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸತೀಶ್ ಜಾರಕಿಹೊಳಿಯವರು ಈ ಹಿಂದೂ ದೇಶದ ಅನಾದಿ ಕಾಲದ ಸಂಸ್ಕೃತಿ, ಹಿಂದೂ ಜನರ ಭಾವನೆಗಳು, ಹಿಂದೂ ಧರ್ಮೀಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಸತೀಶ್ ಜಾರಕಿಹೊಳಿಯವರ ಜಿಲ್ಲೆ ಬೆಳಗಾವಿಯಲ್ಲಿ ಕೂಡ ಪ್ರತಿಭಟನೆ ತೀವ್ರವಾಗಿದೆ. ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಸತೀಶ್ ಜಾರಕಿಹೊಳಿ ಹೇಳುವುದೇನು?: ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನು ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು ಎಂದು ನಾನು ಹೇಳಿದ್ದೇನೆ. ಆದರೆ ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಬೇರೆ ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಎಂದು ಎಂದಿದ್ದಾರೆ.

ನಾನು ತಪ್ಪು ಹೇಳಿದ್ದೇನೆಂದು ಸಾಬೀತುಪಡಿಸಿದರೆ ಕ್ಷಮೆಯಾಚಿಸುವುದಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನಾನು ಯಾರಿಗೂ ಕ್ಷಮೆ ಕೇಳುವ ಪ್ರಶ್ನೆಯಿಲ್ಲ, ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ನಾನು ಅರೆಬರೆ ಓದಿದವನಲ್ಲ, 30 ವರ್ಷಗಳಿಂದ ಓದುತ್ತಲೇ ಇದ್ದೇನೆ. ಆಳವಾದ ಅಧ್ಯಯನದ ಅನುಭವದಿಂದಲೇ ನಾನು ಈ ಹೇಳಿಕೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಹೇಳಿಕೆಯನ್ನು ಸಾರಾಸಗಟಾಗಿ ವಿರೋಸುವ ಬದಲು, ಸಮರ್ಪಕವಾಗಿ ಪರಿಶೀಲಿಸಲಿ. ಯಾವುದೇ ಧರ್ಮ, ಜಾತಿ, ಸಮಾಜದ ವಿರುದ್ಧ ನಾನು ಹೇಳಿಕೆ ನೀಡಿಲ್ಲ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಅವರಿಗೆ ಸೂಕ್ತ ಎನಿಸುವ ಸಂಸ್ಥೆಗಳಿಗೆ ತನಿಖೆ ಮಾಡಿಸಲಿ. ನನ್ನ ಜತೆ ಚರ್ಚೆಗೆ ಬಂದರೆ ನಾನೇ ಅವರಿಗೆ ಮನವರಿಕೆ ಮಾಡಿಕೊಡುವೆ. ಚರ್ಚೆಗೆ ಬಂದವರಿಗೆ ದಾಖಲೆ ಸಮೇತ ವಿವರಣೆ ನೀಡಲು ಸಿದ್ಧನಿರುವೆ ಎಂದು ಹೇಳಿದ್ದಾರೆ.

ಕಳೆದ ಭಾನುವಾರ ಬೆಳಗಾವಿಯ ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ¾ಮನೆಮನೆಗೆ ಬುದ್ಧ, ಬಸವ, ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಹಿಂದೂ ಶಬ್ದದ ಅರ್ಥದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು.

ಪೀಣ್ಯ-ನಂದಿನಿ ಬಡಾವಣೆ ಸಂಪರ್ಕ ಕೆಳಸೇತುವೆಗೆ ಗ್ರಹಣ : ಬಿಡಿಎ ಮೊಂಡುತನಕ್ಕೆ ಜನ ಹೈರಾಣ

ಸಿಎಂ ತಿರುಗೇಟು:
ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗರಂ ಆಗಿದ್ದಾರೆ. ವಿಕಿಪಿಡಿಯದಲ್ಲಿ ಬಂದಿದ್ದೆಲ್ಲ ಸತ್ಯವಲ್ಲ. ಅದರ ಮೇಲೆ ಸಾಕಷ್ಟು ದೂರುಗಳು, ಆರೋಪಗಳು ಕೇಳಿಬಂದಿವೆ. ಅದರಲ್ಲಿ ಬಂದಿದ್ದೇ ಸತ್ಯ ಎನ್ನುವುದಾದರೆ ಬೇರೆ ಧರ್ಮಗಳ ಬಗ್ಗೆಯೂ ಉಲ್ಲೇಖವಾಗಿದೆ. ಅದರ ಬಗ್ಗೆ ಅವರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪುಸ್ತಕ ಓದಿಕೊಂಡು ಇಲ್ಲವೇ ಅರೆಬರೆ ತಿಳಿದುಕೊಂಡು ನಾನು ಮೇಧಾವಿ ನಾನು ಹೇಳಿದ್ದೇ ಸತ್ಯ. ನನ್ನ ಹೇಳಿಕೆಗೆ ಬದ್ದನಾಗಿದ್ದೇನೆ ಎಂದು ಹೇಳುವುದು ಮೊಂಡುತನ ತೋರಿಸುತ್ತದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಕ್ಷಮೆ ಕೇಳಲು ನಿರಾಕರಿಸಿದ ಸತೀಶ್ ಜಾರಕಿಹೊಳಿ, ತಮ್ಮದೇ ಪಕ್ಷದವರಿಗೂ ಟಾಂಗ್

ಕಾಂಗ್ರೆಸ್ಸೇ ಅಶ್ಲೀಲ:
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಹಿಂದೂ ಧರ್ಮದ ಪದ ಅಶ್ಲೀಲ ಎನ್ನುವ ಕೆಪಿಸಿಸಿ ಕಾರ್ಯಾಧ್ಯಕ್ಷ ಜಾರಕಿಹೊಳಿಗೆ ಸರಿಯಾದ ಇತಿಹಾಸ ಗೊತ್ತಿಲ್ಲ. ವಾಸ್ತವವಾಗಿ ಕಾಂಗ್ರೆಸ್ ಪಕ್ಷವೇ ಒಂದು ಅಶ್ಲೀಲ ರಾಜಕೀಯ ಪಕ್ಷ ಎಂದು ತಿರುಗೇಟು ನೀಡಿದರು.

Articles You Might Like

Share This Article