ಬೆಂಗಳೂರು, ಜ.22- ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಒತ್ತಡಕ್ಕೆ ಮಣಿದು ವಾರಾಂತ್ಯ ಕರ್ಫ್ಯೂವನ್ನು ಸರ್ಕಾರ ರದ್ದುಪಡಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆರೋಪಿಸಿದರು.
ಕೋವಿಡ್ ಮೂರನೆ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಶೀತ, ಕೆಮ್ಮು, ಜ್ವರದಿಂದ ಜನರು ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಾರಾಂತ್ಯ ಕರ್ಫ್ಯೂವನ್ನು ಸರ್ಕಾರ ವಾಪಸ್ ಪಡೆದಿದೆ. ಇದರಿಂದ ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಉಂಟಾಗಲಿದೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಶಾಲೆಗಳನ್ನು ಮುಚ್ಚುವುದು ಒಳ್ಳೆಯದು. ಸೋಂಕು ಇಳಿಮುಖವಾಗುವವರೆಗೂ ಶಾಲೆಗಳನ್ನು ನಡೆಸದಿರುವುದು ವಿದ್ಯಾರ್ಥಿಗಳ ಆರೋಗ್ಯದಿಂದ ಉತ್ತಮ. ಮಕ್ಕಳ ಆರೋಗ್ಯದ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ವಸತಿ ಶಾಲೆಗಳಲ್ಲೂ ಕೋವಿಡ್ ಪಾಸಿಟಿವ್ ಕಂಡುಬರುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕೋವಿಡ್ ಸಂಕಷ್ಟಕ್ಕೆ ಒಳಗಾಗಿರುವ ಸಮುದಾಯ ಮತ್ತು ವರ್ಗದವರಿಗೆ ಸರ್ಕಾರ ಸಹಾಯಹಸ್ತ ಚಾಚಬೇಕಿದೆ. ಕೆಲವು ಸಂಘಟನೆಗಳ ಒತ್ತಡಕ್ಕೆ ಮಣಿದು ವಾರಾಂತ್ಯ ಕಫ್ರ್ಯೂವನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೆ, ಉಳಿದ ಕೋವಿಡ್ ಮಾರ್ಗಸೂಚಿಗಳನ್ನು ಮುಂದುವರಿಸಿದೆ.
ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮನೋಭಾವ ತಾಳದೆ ಕೋವಿಡ್ ಮೂರನೆ ಅಲೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಎರಡನೆ ಅಲೆಯಲ್ಲಿ ಉಂಟಾದ ಸಾವು-ನೋವು ಹಾಗೂ ಸಂಕಷ್ಟವನ್ನು ಇನ್ನೂ ಜನರು ಮರೆತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
