ಉಗ್ರನನ್ನು ಬಂಧಿಸಿ ಅನಾಹುತ ತಡೆಯುವಲ್ಲಿ ಪೊಲೀಸರು ಯಶಸ್ವಿ : ಜ್ಞಾನೇಂದ್ರ

Social Share

ನವದೆಹಲಿ,ಜು.25-  ಉಗ್ರ ಸಂಘಟನೆಗೆ ಸೇರಿದವನೆಂಬ ಶಂಕೆಯ ಮೇರೆಗೆ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಉಗ್ರನೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ಸಾಂ ಮೂಲದ ಅಖ್ತರ್ ಎಂಬ ಶಂಕಿತ ಉಗ್ರನನ್ನು ತಿಲಕ್‍ನಗರದ ಬಿಪಿಟಿ ಪ್ರದೇಶದಲ್ಲಿ ಸಿಸಿಬಿ ಪೊಲೀಸರು ಬಂಧಿಸಿ  ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಗುಪ್ತಚರ ವಿಭಾಗದ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದರು.

ಶಂಕಿತ ಉಗ್ರನ ಜೊತೆಗೆ ಆತನ ಜೊತೆಯಲ್ಲಿದ್ದ ಇತರೆ ಮೂವರನ್ನು ಸಹ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಓರ್ವ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಉಳಿದವರ ಚಲನವಲನಗಳ ಬಗ್ಗೆಯೂ ಸಿಸಿಬಿ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಇವರು ಬೆಂಗಳೂರಿನಲ್ಲಿ ಎಷ್ಟು ದಿನಗಳಿಂದ ವಾಸವಾಗಿದ್ದರು, ಯಾರ ಯಾರ ಜೊತೆ  ಸಂಪರ್ಕ ಇಟ್ಟುಕೊಂಡಿದ್ದಾರೆ. ಕೆಲವು ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕವಿದೆಯೇ? ಮೊಬೈಲ್  ಕರೆಗಳ  ವಿವರ ಇತ್ಯಾದಿ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸಿಸಿಬಿ ಪೊಲೀಸರು  ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿರುವುದರಿಂದ ಹೆಚ್ಚಿನ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರನನ್ನು ಬಂಸಲಾಗಿತ್ತು.  ಈತ ಓಕಳಿಪುರದಲ್ಲಿ ವಾಸವಾಗಿದ್ದ. ನಮ್ಮ ಪೊಲೀಸರು ತಕ್ಷಣವೇ ಕಾರ್ಯೋನ್ಮುಖರಾಗಿ ಬಂಧಿಸಿ ಜಮ್ಮುಕಾಶ್ಮೀರದ ಪೊಲೀಸರಿಗೆ ಹಸ್ತಾಂತರ ಮಾಡಿದರು.

ಭವಿಷ್ಯದಲ್ಲಿ ಸಂಭವಿಸಬಹುದಾಗಿದ್ದ ಬಹುದೊಡ್ಡ ಅನಾಹುತವನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು  ಜ್ಞಾನೇಂದ್ರ ಹೇಳಿದರು.

Articles You Might Like

Share This Article