ಹೋಳಿ ವೇಳೆ ಕಣ್ಣು ರಕ್ಷಿಸಿಕೊಳ್ಳುವುದು ಹೇಗೆ..?

Spread the love

ಬೆಂಗಳೂರು, ಮಾ.28- ಬಣ್ಣಗಳ ಹಬ್ಬ ಹೋಳಿ ಇಂದು ಮತ್ತು ನಾಳೆ. ಈ ಹಬ್ಬವನ್ನು ಎಲ್ಲರೂ ಕಾತರದಿಂದ ಕಾಯುತ್ತಾರೆ. ಬಣ್ಣಗಳ ಚೆಲ್ಲಾಟ ಆಡಿ ಕುಪ್ಪಳಿಸುವ ಸಂದರ್ಭದಲ್ಲಿ ಕಣ್ಣುಗಳ ರಕ್ಷಣೆ ಬಗ್ಗೆ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ವಿನೋದವನ್ನು ಆಚರಣೆ ಮಾಡುವ ವೇಳೆ ನಮ್ಮ ಬಗ್ಗೆ ವಿಶೇಷವಾಗಿ ನಮ್ಮ ಕಣ್ಣುಗಳ ರಕ್ಷಣೆ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ, ಬಣ್ಣಗಳನ್ನು ತಯಾರಿಸಲು ತರಕಾರಿಗಳು ಮತ್ತು ಹೂವುಗಳನ್ನು ಬಳಸುವುದನ್ನು ಕೈಬಿಡುತ್ತಿದ್ದಾರೆ. ಇದರ ಬದಲಾಗಿ ಸಿಂಥೆಟಿಕ್ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತಿದೆ. ಈ ಬಣ್ಣಗಳು ನಮ್ಮ ದೃಷ್ಟಿಯ ಮೇಲೆ ಗಂಭೀರವಾದ ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ ಹೋಳಿ ಆಡುವ ಸಂದರ್ಭದಲ್ಲಿ ಕಣ್ಣುಗಳ ರಕ್ಷಣೆ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಾಗುತ್ತದೆ. ಒಂದು ವೇಳೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸದಿದ್ದರೆ ಅಲರ್ಜಿ, ಸೋಂಕು, ಮತ್ತು ಕೆಲವೊಮ್ಮೆ ತಾತ್ಕಾಲಿಕ ಅಂಧತ್ವ ಬರಬಹುದು.

ಕಣ್ಣಿನ ಸುತ್ತಮುತ್ತ ಇರುವ ಚರ್ಮ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹೊರಗೆ ಹೋಗುವ ಮುನ್ನ ಕಣ್ಣುಗಳ ಸುತ್ತ ಕೊಬ್ಬರಿ ಎಣ್ಣೆ ಅಥವಾ ಆಲ್ಮಂಡ್ ಆಯಿಲ್ ಹಚ್ಚಿ. ಶೇಡ್‍ಗಳನ್ನು ಬಳಸುವುದರಿಂದ ತಂಪಾಗಿ ಕಾಣುವುದರ ಹೊರತಾಗಿ, ಕಣ್ಣು ಸಹ ಸುರಕ್ಷಿತವಾಗಿರುತ್ತವೆ. ಯಾರಾದರೂ ಬಣ್ಣಗಳನ್ನು ಎರಚುವಾಗ ಆ ಬಣ್ಣ ಕಣ್ಣುಗಳನ್ನು ಪ್ರವೇಶಿಸದಂತೆ ನೋಡಿಕೊಳ್ಳಿ. ರಕ್ಷಣಾತ್ಮಕ ಗ್ಲಾಸ್‍ಗಳು, ಸನ್‍ಗ್ಲಾಸ್‍ಗಳು ಅಥವಾ ಪ್ಲೇನ್ ಗ್ಲಾಸ್‍ಗಳನ್ನು ಬಳಸಿ. ಒಂದು ವೇಳೆ ಬಣ್ಣ ಕಣ್ಣಿನೊಳಗೆ ಹೋದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಕಣ್ಣಿನಿಂದ ಹೊರತೆಗೆಯಲು ಪ್ರಯತ್ನಿಸಿ. ಕಣ್ಣಿಗೆ ಬಣ್ಣ ಬಿದ್ದ ತಕ್ಷಣ ಕಣ್ಣುಗಳನ್ನು ಶುದ್ಧ ಅಥವಾ ಕುಡಿಯುವ ನೀರಿನಿಂದ ಹಲವು ಬಾರಿ ತೊಳೆಯಿರಿ.

ಮುಖವನ್ನು ಕೆಳಗೆ ಮಾಡಿ ಮತ್ತು ನಿಮ್ಮ ಬೊಗಸೆಯಲ್ಲಿರುವ ನೀರಿನೊಳಗೆ ಕಣ್ಣುಗಳನ್ನು ನಿಧಾನವಾಗಿ ತೆರೆಯಿರಿ. ಆಗಾಗ್ಗೆ ಕಣ್ಣುಗಳನ್ನು ಮಿಟುಕಿಸಿ ಮತ್ತು ಕಣ್ಣಿನ ಸುತ್ತ ಇರುವ ಬಣ್ಣವನ್ನು ತೆಗೆಯಲು ಪ್ರಯತ್ನಿಸಿ. ಯಾವುದೇ ಕಾರಣಕ್ಕೂ ಕಣ್ಣಿನೊಳಗೆ ನೀರನ್ನು ಹಾಕಬೇಡಿ. ತಲೆಯ ಮೇಲೆ ಬಿದ್ದಿರುವ ಬಣ್ಣ ಕಣ್ಣನ್ನು ಪ್ರವೇಶಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮತ್ತು ನೀರಿನಲ್ಲಿ ಬೀಳುವುದನ್ನು ತಪ್ಪಿಸಲು ನಿಮ್ಮ ತಲೆಗೂದಲನ್ನು ಕಟ್ಟಿ ಮತ್ತು ಟೋಪಿಯನ್ನು ಹಾಕಿಕೊಳ್ಳಿ. ಕಣ್ಣಿನೊಳಗೆ ಬಣ್ಣ ಹೋದರೆ ಕಣ್ಣಿನ ಸೋಂಕು ಮತ್ತು ಅಲರ್ಜಿಗೆ ಕಾರಣವಾಗುತ್ತದೆ.

ಕಣ್ಣಿಗೆ ಬಣ್ಣ ಬಿದ್ದ ನಂತರ ಕಣ್ಣು ಕೆಂಪುಬಣ್ಣಕ್ಕೆ ತಿರುಗುವುದು ಅಥವಾ ಕಣ್ಣಿನಿಂದ ನಿರಂತರವಾಗಿ ನೀರು ಸೋರುವುದು, ಕಿರಿಕಿರಿ ಉಂಟಾಗುವುದು, ಆರಾಮವಿಲ್ಲದಂತೆ ಅನುಭವವಾಗುವುದು ಅಥವಾ ರಕ್ತಸ್ರಾವವಾದಲ್ಲಿ ತಕ್ಷಣವೇ ನೇತ್ರ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ.

Facebook Comments