ಬೆಳಗಾವಿ,ಆ.22- ನಗರದಲ್ಲಿ ಕೆಲ ದಿನಗಳ ಹಿಂದೆ ಪ್ರತ್ಯಕ್ಷವಾಗಿ ನಂತರ ನಾಪತ್ತೆಯಾಗಿದ್ದ ಚಿರತೆ ಇಂದು ಬೆಳ್ಳಂಬೆಳಗ್ಗೆ ಮತ್ತೆ ಕಾಣಿಸಿಕೊಂಡಿದ್ದು, ಜನರ ನಿದ್ದೆಗೆಡಿಸಿದೆ. ಕಳೆದ ಆ.5ರಂದು ಜಾದವ್ ನಗರದಲ್ಲಿ ಚಿರತೆ ಕಾರ್ಮಿಕರೊಬ್ಬರ ಮೇಲೆ ದಾಳಿ ಮಾಡಿ ಗಾಲ್ ಮೈದಾನದಲ್ಲಿ ಅಡಗಿ ಕುಳಿತಿತ್ತು.
ಅರಣ್ಯ ಇಲಾಖೆ ಚಿರತೆ ಸೆರೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಆದರೆ, ಆಗೊಮ್ಮೆ ಹೀಗೊಮ್ಮೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಆದರೆ, ಇಂದು ಬೆಳ್ಳಂಬೆಳಗ್ಗೆ ಹಿಂಡಲಗ ವಿದ್ಯಾಮಂದಿರ ಬಳಿಯ ಡಬ್ಬಲ್ ರಸ್ತೆಯಲ್ಲಿ ಚಿರತೆ ಮತ್ತೆ ಕಾಣಿಸಿಕೊಂಡಿರುವುದನ್ನು ಬಸ್ ಚಾಲಕರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಚಿರತೆ ಸೆರೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ 22 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.