ಬೆಂಗಳೂರಲ್ಲಿ ದಿನಸಿ, ತರಕಾರಿ, ಔಷಧಿ ಹೋಮ್ ಡೆಲಿವರಿ ಸಹಾಯವಾಣಿಗೆ ಸಿಎಂ ಚಾಲನೆ
ಬೆಂಗಳೂರು, ಏ.21- ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಸಿ, ತರಕಾರಿ, ಔಷಧಿ, ಸಾಮಾಗ್ರಿಗಳನ್ನು ಮನೆಬಾಗಿಲಿಗೆ ತಲುಪಿಸುವ ಹೋಮ್ ಡೆಲಿವರಿ ಸಹಾಯವಾಣಿ-080 61914960ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಹೋಮ್ ಡೆಲಿವರಿ ಸಹಾಯವಾಣಿಗೆ ಕರೆ ಅಥವಾ ವಾಟ್ಸಾಪ್ ಮಾಡುವ ಮೂಲಕ ಅಗತ್ಯವಸ್ತುಗಳನ್ನು ಗ್ರಾಹಕರು ಮನೆಬಾಗಿಲಿಗೆ ತರಿಸಿಕೊಳ್ಳಬಹುದು ಎಂದರು.
ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ದೇಶದಲ್ಲೇ ಮೊದಲನೆಯದಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿಗೆ ಅನುಕೂಲವಾಗುವಂತೆ ಡೆಲವರಿ ಸಹಾಯವಾಣಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ನಾಗರಿಕರ ಸುರಕ್ಷತೆಗೆ ಇದು ಮಹತ್ವಪೂರ್ಣ ಹೆಜ್ಜೆಯಾಗಿದೆ. ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿದರೆ ಸಮೀಪದ ಅಂಗಡಿಗೆ ಸಂದೇಶ ವರ್ಗಾವಣೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಈ ಸೇವೆಯನ್ನು ಒದಗಿಸಲು 18,000 ದಿನಸಿ, ತರಕಾರಿ ಹಾಗೂ ಔಷಧಿ ಮಾರಾಟಗಾರರು ನೋಂದಾಯಿಸಿಕೊಂಡಿದ್ದಾರೆ.
ಇದು ಗ್ರಾಹಕರು ಮತ್ತು ವರ್ತಕರಿಗೆ ಅನುಕೂಲವಾಗಲಿದೆ. ಗ್ರಾಹಕರ ಮನೆ ಬಾಗಿಲಿಗೆ ಅಗತ್ಯ ಸಾಮಗ್ರಿ ತಲುಪಿಸಲು 5000 ಡೆಲಿವರಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಈ ಸೇವೆಗೆ ಗ್ರಾಹಕರು ಹತ್ತು ರೂ. ನೀಡಬೇಕಾಗುತ್ತದೆ ಎಂದರು.
ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ರಾಜೀವ್ ಚಂದ್ರಶೇಖರ್, ಕಂದಾಯ ಸಚಿವ ಆರ್.ಅಶೋಕ್, ಮೇಯರ್ ಗೌತಮ್ಕುಮಾರ್, ಬಿಬಿಎಂಪಿ ಆಯುಕ್ತ ಅನಿಲ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.