ಬೆಂಗಳೂರು,ಜ.24- ಕೊರೊನಾ ಸೋಂಕು ಕಾಣಿಸಿಕೊಂಡು ಹೋಂ ಐಸೋಲೇಷನ್‍ನಲ್ಲಿದ್ದು ಗುಣಮುಖರಾದವರಿಗೆ ಯಾವುದೆ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಸಿಟಿವ್ ಕಾಣಿಸಿಕೊಂಡವರು ತಮ್ಮ ರಿಪೋರ್ಟ್ ಬಂದ ನಂತರ 7 ದಿನಗಳ ಕಾಲ ಹೋಂ ಐಸೋಲೇಷನ್‍ನಲ್ಲಿ ಇರಬೇಕು. ಒಂದು ವೇಳೆ 7 ದಿನಗಳ ನಂತರವೂ ರೋಗ ಲಕ್ಷಣ ಇದ್ದರೆ ಮತ್ತಷ್ಟು ದಿನಗಳ ಕಾಲ ಐಸೋಲೇಷನ್‍ನಲ್ಲಿ ಇರಬೇಕಾಗುತ್ತದೆ ಎಂದರು.
7 ದಿನಗಳ ಒಳಗೆ ಸೋಂಕು ಮಾಯವಾಗಿದ್ದರೆ ಅದು ಆಟೋ ಡಿಸ್ಚಾರ್ಜ್ ಆಗಬಹುದು. ಅದಕ್ಕೆ ಯಾವುದೇ ಸರ್ಟಿಫಿಕೆಟ್‍ನ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಕೆಲವು ಖಾಸಗಿ ಸಂಸ್ಥೆಗಳು ಸೋಂಕಿತರಿಂದ ಡಿಜಿಟಲ್ ಸರ್ಟಿಫಿಕೇಟ್ ಕೇಳುತ್ತಿದ್ದರೆ ಅಂತಹವರಿಗೆ ಸೋಂಕು ದೃಢಪಟ್ಟ ಪಾಸಿಟಿವ್ ವರದಿ ತೋರಿಸಿ ಏಳು ದಿನಗಳನ್ನು ಹೋಂ ಐಸೋಲೇಷನ್‍ನಲ್ಲಿ ಕಳೆದಿರುವ ಬಗ್ಗೆ ಮಾಹಿತಿ ನೀಡಿದರೆ ಸಾಕು ಎಂದರು.
ಕೆಲ ಮೃತಪಟ್ಟ ವ್ಯಕ್ತಿಗಳಿಗೂ ನೀವು ಯಶಸ್ವಿಯಾಗಿ ಲಸಿಕೆ ಹಾಕಿಸಿಕೊಂಡಿದ್ದೀರಾ ಎಂಬ ಬಗ್ಗೆ ಮೆಸೆಜ್ ಹೋಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
