ಬೆಂಗಳೂರು,ಜ.13- ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯನ್ನು ಕೈಬಿಡದಿದ್ದರೆ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಿರುವ ನಿಯಮದಂತೆ ಒಂದು ಹೆಜ್ಜೆ ಕೂಡ ಮುಂದೆ ಹೋಗುವಂತಿಲ್ಲ.
ಹಾಗೊಂದು ವೇಳೆ ಪಾದಯಾತ್ರೆ ಕೈಗೊಂಡರೆ ಕಾನೂನು ಪ್ರಕಾರವೇ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಪಾದಯಾತ್ರೆಯನ್ನು ಕಾಂಗ್ರೆಸ್ ನಾಯಕರು ನಿಲ್ಲಿಸಬಹುದೆಂಬ ವಿಶ್ವಾಸವಿದೆ.
ರಾಮನಗರದಲ್ಲಿ ಸಭೆ ನಡೆಸಿದ ಬಳಿಕ ಅವರು ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ನಿಯಮಕ್ಕೆ ಗೌರವ ಕೊಡುತ್ತಾರೆಂಬ ಭಾವನೆ ಇದೆ. ಈ ಎರಡನ್ನೂ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಖಚಿತ ಎಂದರು. ಕಾನೂನಿಗಿಂತ ಯಾರೊಬ್ಬರೂ ದೊಡ್ಡವರಲ್ಲ. ಪ್ರತಿಯೊಬ್ಬರೂ ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ನಿಯಮಗಳನ್ನು ಪಾಲನೆ ಮಾಡಲೇಬೇಕು. ಪಾದಯಾತ್ರೆ ಮಾಡುತ್ತೇನೆಂದು ಹೊರಟರೆ ಅಂತಹವರಿಗೆ ಕಾನೂನು ಪ್ರಕಾರವೇ ಶಿಕ್ಷೆಯಾಗಲಿದೆ ಎಂದು ಗುಡುಗಿದರು.
ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಶಾಸಕ ಶಿವಶಂಕರರೆಡ್ಡಿ, ಮಾಜಿ ಸದಸ್ಯೆ ಮಲ್ಲಾಜಮ್ಮ ಸೇರಿದಂತೆ ಅನೇಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದು ಬದ್ಧತೆಯಿಂದ ನಡೆಸುತ್ತಿರುವ ಪಾದಯಾತ್ರೆಯಲ್ಲ. ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಪಾದಯಾತ್ರೆ ಎಂದು ವಾಗ್ದಾಳಿ ನಡೆಸಿದರು.
ಅನೇಕ ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷದ ನಾಯಕರು ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡಲೇಬೇಕು. ಎಲ್ಲವನ್ನೂ ಗಾಳಿಗೆ ತೂರಿ ಪಾದಯಾತ್ರೆ ಮಾಡುತ್ತೇನೆ ಎಂದರೆ ಜನರೇ ಛೀಮಾರಿ ಹಾಕುತ್ತಾರೆ ಎಂದು ಜ್ಞಾನೇಂದ್ರ ಕಿಡಿಕಾರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ನಾಯಕತ್ವ ಉಳಿಸಿಕೊಳ್ಳಲು ಪಾದಯಾತ್ರೆ ನಡೆಸುತ್ತಿದ್ದಾರೆ. ಇದರಲ್ಲಿ ಜನರ ಹಿತಕ್ಕಿಂತ ಅವರ ವೈಯಕ್ತಿಕ ಹಿತ ಅಡಗಿದೆ. ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ಈ ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ನೂರಕ್ಕೆ ನೂರರಷ್ಟು ಇದು ಒಬ್ಬರಿಂದ ಮತ್ತೊಬ್ಬರಿಗೆ ಕೊರೊನಾ ಅಂಟಿಸುವ ಪಾದಯಾತ್ರೆಯಾಗಿದೆ. ಈಗಾಗಲೇ ಪಾದಯಾತ್ರೆಯಲ್ಲಿ ಭಾಗಿಯಾದ ಅನೇಕರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಒಬ್ಬರಿಗೆ ತೊಂದರೆ ಕೊಟ್ಟು ತಮ್ಮ ಹಿತಕ್ಕಾಗಿ ಪಾದಯಾತ್ರೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಜನರು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಆತಂಕಗೊಂಡಿದ್ದಾರೆ. ಬೀದಿಬದಿ ವ್ಯಾಪಾರಿಗಳು, ಕಾರ್ಮಿಕರು, ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಸಿಬ್ಬಂದಿ, ಕಾರ್ಖಾನೆಯಲ್ಲಿ ಕೆಲಸ ಮಾಡುವವರು, ಜನಸಾಮಾನ್ಯರು ಮತ್ತೆ ಲಾಕ್‍ಡೌನ್ ಮಾಡಬಹುದೆಂಬ ಆತಂಕದಲ್ಲಿದ್ದಾರೆ. ಜನರಿಗೆ ದೈನಂದಿನ ಜೀವನ ನಡೆಸುವುದೇ ಕಷ್ಟಕರವಾಗಿದೆ. ಅಂತಹದ್ದರಲ್ಲಿ ಇವರು ಪಾದಯಾತ್ರೆ ನಡೆಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿನ್ನೆ ರಾತ್ರಿ ಮತ್ತೊಮ್ಮೆ ಎಲ್ಲ ಜಿಲ್ಲಾಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಪರಿಸ್ಥಿತಿಗನುಗುಣವಾಗಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ನನಗೆ ಈಗಲೂ ಕೂಡ ವಿಶ್ವಾಸವಿದ್ದು, ಕಾಂಗ್ರೆಸ್ ಪ್ರತಿಭಟನೆಯನ್ನು ಹಿಂಪಡೆಯಲಿದೆ ಎಂಬ ಆಶಾಭಾವನೆಯನ್ನು ಜ್ಞಾನೇಂದ್ರ ವ್ಯಕ್ತಪಡಿಸಿದರು.
