ಬಲವಂತವಾಗಿ ಬಂದ್ ಬೆಂಬಲಿಸುವಂತೆ ಒತ್ತಡ ಹಾಕಿದರೆ ಕಾನೂನು ಕ್ರಮ

ಹುಬ್ಬಳ್ಳಿ,ಡಿ.29-ಕಾನೂನು ಬಾಹಿರವಾಗಿ ಇಲ್ಲವೇ ಬಲವಂತವಾಗಿ ಬಂದ್ ಬೆಂಬಲಿಸುವಂತೆ ಯಾರಾದರೂ ಒತ್ತಡ ಹಾಕಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್‍ನಲ್ಲಿ ಭಾಗವಹಿಸಬೇಕೆಂದು ಸಾರ್ವಜನಿಕರಿಗೆ ಯಾವುದೇ ಸಂಘಟನೆಗಳು ಒತ್ತಡ ಇಲ್ಲವೇ ಬಲವಂತ ಮಾಡುವಂತಿಲ್ಲ. ಹಾಗೊಂದು ವೇಳೆ ಕಂಡುಬಂದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.

ಸತತ ಎರಡು ಲಾಕ್‍ಡೌನ್ ಜಾರಿಯಿಂದಾಗಿ ರೈತರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲರಿಗೂ ಆರ್ಥಿಕ ಹೊಡೆತ ಬಿದ್ದಿದೆ. ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಬಂದ್ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಬಂದ್‍ಗೆ ಕರೆ ಕೊಡುವ ಮುಖಂಡರು ಹತ್ತಾರು ಬಾರಿ ಯೋಚಿಸಬೇಕಿತ್ತು. ಬಂದ್ ಮಾಡುವುದರಿಂದಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ರಾಜ್ಯದಲ್ಲಿ ಎಂಇಎಸ್‍ನ್ನು ನಿಷೇಧಿಸಲು ಕಾನೂನಿನ ತೊಡಕುಗಳಿವೆ. ಈಗಾಗಲೇ ಮುಖ್ಯಮಂತ್ರಿಯವರೇ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಎಂಇಎಸ್ ನಿಷೇಧವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

ಯಾವುದೇ ಒಂದು ಸಂಘಟನೆಯನ್ನು ನಿಷೇಧಿಸಬೇಕೆಂದರೆ ಕಾನೂನು ಕ್ರಮಗಳನ್ನು ಪರಿಶೀಲಿಸಬೇಕಾಗುತ್ತದೆ. ನೀವು ಇಂದೇ ಮಾಡಿ, ಹೀಗೆ ಮಾಡಿ ಎಂದು ಹೇಳುವುದು ಸರಿಯಲ್ಲ. ಎಂಇಎಸ್ ಇರಲಿ, ಯಾರೇ ಇರಲಿ ಪುಂಡಾಟಿಕೆ ಮಾಡಿದರೆ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲು ಹಿಂದೆಮುಂದೆ ನೋಡುವುದಿಲ್ಲ ಎಂದು ಗುಡುಗಿದರು.