ಲಾಕ್‍ಡೌನ್ ಅಗತ್ಯವಿಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ

Social Share

ಬೆಂಗಳೂರು, ಜ.14- ರಾಜ್ಯದಲ್ಲಿ ಪ್ರತಿದಿನ ಕೋವಿಡ್ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುತ್ತಿದ್ದು, ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸಲು ಕೈಜೋಡಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ತೊಂದರೆ ಕೊಟ್ಟು ನಾವು ಲಾಕ್‍ಡೌನ್ ಮಾಡಬೇಕಾದ ಅಗತ್ಯವಿಲ್ಲ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಭೆ ನಡೆಸಿದಾಗ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಜೀವ ನಮ್ಮ ಕೈಯಲ್ಲೇ ಇದೆ. ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಈಗಿರುವ ನಿಯಮಗಳನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ. ಹಾಗಂತ ಸಡಿಲ ಸಹ ಮಾಡುವುದಿಲ್ಲ. ಬಿಗಿಯಾದ ಕ್ರಮಗಳು ಮುಂದುವರೆಯುತ್ತವೆ. ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪುನರುಚ್ಚರಿಸಿದರು.
ಜನರ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಕೊಟ್ಟು ಲಾಕ್‍ಡೌನ್ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಒಂದು ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಎಷ್ಟು ತೊಂದರೆಯಾಗಿದೆ ಎಂಬುದು ನಮಗೂ ಗೊತ್ತು. ಕೆಲವು ಸಂದರ್ಭಗಳಲ್ಲಿ ಕೊರೊನಾ ನಿಯಂತ್ರಿಸಲು ಕಠಿಣವಾದ ನಿಯಮಗಳು ಅನಿವಾರ್ಯ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೋವಿಡ್ ನಿಯಂತ್ರಣಕ್ಕೆ ಜನರು ನಮ್ಮೊಂದಿಗೆ ಕೈ ಜೋಡಿಸಬೇಕು. ಮಾಸ್ಕ್ ಇಲ್ಲದೆ ತಿರುಗಾಟ ನಡೆಸಬೇಡಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಜ್ಞಾನೇಂದ್ರ ಮನವಿ ಮಾಡಿದರು.
ವಾಗ್ದಾಳಿ: ಇನ್ನು ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ಇಂದು ಕೂಡ ಮುಂದುವರೆಸಿದರು. ನಾವು ಅವರ ಪಾದಯಾತ್ರೆಯನ್ನು ತಡೆಯಲು ಯಾವುದೇ ಷಡ್ಯಂತ್ರ ನಡೆಸಲಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‍ನವರ ವಿಫಲಕ್ಕೆ ಅವರು ಏನು ಬೇಕಾದರೂ ಮಾತನಾಡಬಹುದು. ಮೊದಲನೆಯದಾಗಿ ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದ್ದೇ ಮಹಾತಪ್ಪು. ಎರಡನೆಯದಾಗಿ ಅವರು ಪಾದಯಾತ್ರೆ ನಡೆಸುವ ನಿರ್ಧಾರ ಮಾಡಿದ್ದು ಇನ್ನೊಂದು ತಪ್ಪು ಎಂದು ವಾಗ್ದಾಳಿ ನಡೆಸಿದರು.
ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಲು ಹೊರಟರು. ಆದರೆ, ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಜನರಿಗೆ ಅನುಕೂಲವಾಗುವ ಬದಲು ಸ್ವಾರ್ಥವೇ ಅಡಗಿತ್ತು. ಹಾಗಾಗಿ ಇದರಿಂದ ಏನೂ ಆಗಲಿಲ್ಲ ಎಂದು ವ್ಯಂಗ್ಯವಾಡಿದರು.
ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಯಾರಾದರೂ ವಿರೋಧ ವ್ಯಕ್ತಪಡಿಸಿದ್ದರಾ? ವಿರೋಧ ಪಕ್ಷ ಇಲ್ಲಿ ಇದೆಯೇ, ಇವರು ಯಾರ ವಿರುದ್ಧ ಪಾದಯಾತ್ರೆ ಮಾಡುತ್ತಾರೆ? ಅಕಾರ ಇದ್ದಾಗ ಏನೂ ಮಾಡಲಾಗದೆ ಈಗ ಕಾಲ್ನಡಿಗೆ ಜಾಥಾ ನಡೆಸಿ ಅದರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೇಕೆದಾಟು ಉದ್ದೇಶವೇ ಜನರಿಗೆ ಅನುಕೂಲವಾಗಬೇಕೆಂಬುದು. ಆದರೆ, ಕಾಂಗ್ರೆಸ್ ನಾಯಕರು ಇದನ್ನು ಸಹ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಜನರ ಲಾಭಕ್ಕಿಂತ ತಮಗೆ ಲಾಭವಾಗಲಿ ಎಂಬುದು ಅವರ ದುರಾಲೋಚನೆಯಾಗಿತ್ತು. ಖಂಡಿತ ಇದು ನಾಚಿಕೆಗೇಡು ಎಂದು ಟೀಕಿಸಿದರು.
ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣ ಕಡೆಗೆ ಎಂಬ ನಡಿಗೆಯನ್ನು ಸಂಕ್ರಾಂತಿ ದಿನದಂದು ಆರಂಭಿಸಿ ಸಂಗಮಕ್ಕೆ ಹೋದರು. ಅಲ್ಲಿ ನೀರು ಹಿಡಿದು ಶಪಥ ಮಾಡಿ ವರ್ಷಕ್ಕೆ 10 ಸಾವಿರ ಕೋಟಿ ಕೊಡುತ್ತೇವೆ ಎಂದು ವಾಗ್ದಾನ ಮಾಡಿದರು. ಐದು ವರ್ಷ ಇವರ ಪಕ್ಷ ಅಕಾರದಲ್ಲಿದ್ದಾಗ ಈ ಯೋಜನೆಗೆ ಖರ್ಚು ಮಾಡಿದ್ದು ಕೇವಲ ಏಳೂವರೆ ಸಾವಿರ ಕೋಟಿ ಎಂದರು.
ವರ್ಷಕ್ಕೆ 10 ಸಾವಿರ ಕೋಟಿ ಕೊಡುತ್ತೇನೆ ಎಂದು ವಾಗ್ದಾನ ಮಾಡಿದವರು ಕೊಡಲೇ ಇಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ನೀರಾವರಿ ಯೋಜನೆ ಬಗ್ಗೆ ಬದ್ಧತೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಎಂದು ಪ್ರಶ್ನಿಸಿದರು.
ಕೋವಿಡ್ ನಿಯಮ ಉಲ್ಲಂಘಿಸಿದ ಎಂ.ಪಿ.ರೇಣುಕಾಚಾರ್ಯ ಮೇಲೆ ಎಫ್‍ಐಆರ್ ಹಾಕಲಾಗಿದೆಯೇ ಎಂಬ ಪ್ರಶ್ನೆಗೆ ಕಾಯ್ದೆ ಎಲ್ಲರಿಗೂ ಒಂದೇ. ಇಲ್ಲಿ ಯಾರೊಬ್ಬರೂ ದೊಡ್ಡವರಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ಜ್ಞಾನೇಂದ್ರ ಆದಷ್ಟು ಶೀಘ್ರ ರಾಜ್ಯವು ಕೊರೊನಾ ಮುಕ್ತವಾಗಲಿ ಎಂದು ಆಶಿಸಿದರು.

Articles You Might Like

Share This Article