ಜೈಲಿನಲ್ಲಿ ಮಾದಕ ವಸ್ತು, ಮೊಬೈಲ್ ಬಳಕೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ

Social Share

ಮೈಸೂರು,ಅ.1- ಜೈಲಿನ ಒಳಗಡೆ ಮಾದಕ ವಸ್ತುಗಳ ಸರಬರಾಜು ಆಗದಂತೆ ಹಾಗೂ ಮೊಬೈಲ್ ಫೋನ್ ಬಳಕೆ ವಿರುದ್ಧ ಕಾರಾಗೃಹದ ಅಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ನಿರ್ದೇಶನ ನೀಡಿದ್ದಾರೆ.
ಜಿಲ್ಲಾ ಪ್ರವಾಸದಲ್ಲಿರುವ ಸಚಿವರು, ಇಂದು ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದ ಸಿಬ್ಬಂದಿಗಳೇ ನಿರ್ವಹಿಸುವ ಎಫ್‍ಎಂ ಬಾನುಲಿ ಕೇಂದ್ರವನ್ನು ವೀಕ್ಷಿಸಿದರು.

ಬಾನುಲಿ ಪ್ರಸಾರ ಕೇಂದ್ರದ ಮೂಲಕ ಸಚಿವರು ಕಾರಾಗೃಹವನ್ನುದ್ದೇಶಿಸಿ ಮಾತನಾಡಿ, ಸರ್ಕಾರದಿಂದ ಕೈದಿಗಳ ಪುನರ್ವಸತಿ, ಹೆಚ್ಚಿಸಿರುವ ಕೂಲಿ ದರ ಹಾಗೂ ಕಾರಾಗೃಹ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ತಂದಿರುವ ಬಗ್ಗೆ ವಿವರಿಸಿದರು. ಕಾರಾಗೃಹವನ್ನು ಸುಧಾರಣೆ ಹಾಗೂ ಮನ ಪರಿವರ್ತನೆಯ ತಾಣವೆಂದು ಸ್ವೀಕರಿಸಿ ಇಲ್ಲಿನ ಹೊರತಾಗಿಯೂ ಬದುಕು ಇದೆ ಎಂಬ ವಾಸ್ತವವನ್ನು ಅರಿತು ಕೊಳ್ಳಿ ಎಂದು ಕೈದಿಗಳಿಗೆ ಕಿವಿಮಾತು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.

ಕಾರಾಗೃಹದಲ್ಲಿರುವ ಕೈಮಗ್ಗ ಘಟಕ, ಕೌಶಲ್ಯ ಅಭಿವೃದ್ದಿ ಕೇಂದ್ರ, ಹೊಲಿಗೆ ತರಬೇತಿ ಘಟಕಕ್ಕೂ ಭೇಟಿ ನೀಡಿದ ಸಚಿವರು, ಸಜಬಂ ಕೈದಿಗಳ ಜತೆ ಸಂಭಾಷಣೆ ನಡೆಸಿದರು. ಕಾರಾಗೃಹದ ಒಳಗಿರುವ ಕೈದಿಗಳ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿದ ಸಚಿವರನ್ನು, ಕೈದಿಗಳು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಬರ ಮಾಡಿಕೊಂಡರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕೇಂದ್ರ ಕಾರಾಗೃಹದ ಘಟಕವನ್ನು ವೀಕ್ಷಿಸಿದ ಸಚಿವರು, ಕೈದಿಗಳಿಂದ ಮನವಿ ಸ್ವೀಕರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಮಹಿಳಾ ಸಜಾಬಂಗಳನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಸಚಿವರು ಆಲಿಸಿದರು. ನಂತರ ಕಾರಾಗೃಹದ ಅಡುಗೆ ವಿಭಾಗಕ್ಕೆ ಭೇಟಿ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಸೂಚಿಸಿದರು.

Articles You Might Like

Share This Article