ಶಿವಮೊಗ್ಗ, ಆ.11- ಇತ್ತೀಚೆಗೆ ಪ್ರವೀಣ್ ನೆಟ್ಟಾರು ಎಂಬ ಬಿಜೆಪಿ ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯ ಕರ್ತನನ್ನು ಬರ್ಬರವಾಗಿ ಹತ್ಯೆಗೈದು, ಕಣ್ಮರೆಯಾಗಿದ್ದ ಮೂರು ಮಂದಿ ಕೊಲೆಗಡುಕರನ್ನು ಕರ್ನಾಟಕ ಪೊಲೀಸರು ಅತ್ಯಂತ ದಕ್ಷತೆಯಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಂಧನದಿಂದ ಕರಾವಳಿ ಭಾಗದಲ್ಲಿ ಮತಾಂಧ ಶಕ್ತಿಗಳ ಕುಮ್ಮಕ್ಕಿನಿಂದ ಪ್ರೇರಿತರಾಗಿ ಕೊಲೆಗೈಯುತ್ತಿದ್ದ ದುಷ್ಕರ್ಮಿಗಳಿಗೆ ಯಾವುದೇ ಕಾರಣಕ್ಕೂ ಕಾನೂನಿನ ಬಾಹುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪೊಲೀಸರು ಸಾರಿದ್ದಾರೆ.
ಕೊಲೆಗಡುಕರಿಗೆ ಪ್ರೇರಣೆ ನೀಡಿದ ದುಷ್ಟರ ಹಾಗೂ ಸಮಾಜ ವಿರೋಧಿ ಶಕ್ತಿಗಳನ್ನು ಗುರುತಿಸಿ ಮಟ್ಟ ಹಾಕಬೇಕಿದೆ ಹಾಗೂ ಈ ಬಗ್ಗೆ ತನಿಖೆ ನಡೆಸುತ್ತಿರುವ ಎನ್‍ಐಎ ಸಂಸ್ಥೆ ಜತೆ ರಾಜ್ಯ ಪೊಲೀಸರು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಪ್ರವೀಣ್ ಹತ್ಯೆ ನಂತರ ನಾನೂ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ಕುಟುಂಬದವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರವೀಣ್ ಪೋಷಕರು ಹಂತಕರನ್ನು ಹಿಡಿದು ತಕ್ಕ ಶಾಸ್ತಿ ನೀಡಬೇಕೆಂದು ಪ್ರಾರ್ಥಿಸಿದ್ದರು.
ಇದೀಗ ಪ್ರವೀಣ್ ಹತ್ಯೆ ಆರೋಪಿಗಳ ಬಂಧನವಾಗಿದೆ ಹಾಗೂ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಎಲ್ಲಾ ಕಾನೂನು ಕ್ರಮ ಜರುಗಿಸಲಾಗುವುದು. ಪ್ರವೀಣ್ ನೆಟ್ಟಾರುನನ್ನು ಅಮಾನುಷವಾಗಿ ಹತ್ಯೆಗೈದ ಆರೋಪಿಗಳನ್ನು ಬಂಧಿಸುವ ಮೂಲಕ ಕರ್ನಾಟಕ ಪೊಲೀಸರ ಕಾರ್ಯಕ್ಷಮತೆ ಮತೊಮ್ಮೆ ಸಾಬೀತಾಗಿದೆ ಎಂದು ವಿವರಿಸಿದರು.
ಇತ್ತೀಚೆಗೆ ರಾಜ್ಯದ ಹುಬ್ಬಳ್ಳಿ ಗಲಭೆಯಾಗಿರಬಹುದು ಅಥವಾ ಶಿವಮೊಗ್ಗದ ಹರ್ಷ ಕೊಲೆ ಮತ್ತು ಬೆಂಗಳೂರಿನ ಚಂದ್ರು ಕೊಲೆ ಪ್ರಕರಣವಾಗಿರಬಹುದು ಹಾಗೂ ಆ್ಯಸಿಡ್ ಎರಚಿದ ಘಟನೆಯಾಗಿರಬಹುದು. ರಾಜ್ಯ ಪೊಲೀಸರು ಅತ್ಯಂತ ದಕ್ಷತೆಯಿಂದ ಕಾರ್ಯಾಚರಣೆ ನಡೆಸಿ ಅಪರಾಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ರಾಜ್ಯ ಪೊಲೀಸರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.