ಡಿಜೆಹಳ್ಳಿ ಪುಂಡರ ಆಸ್ತಿ ಜಪ್ತಿಗೆ ಸದ್ಯದಲ್ಲೇ ಕ್ಲೇಮ್ ಕಮೀಷನರ್ ನೇಮಕ : ಬೊಮ್ಮಾಯಿ
ಬೆಂಗಳೂರು,ಆ.19- ಡಿಜೆಹಳ್ಳಿ ಹಾಗೂ ಕೆಜಿಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ದುಷ್ಕರ್ಮಿಗಳಿಂದಲೇ ಆಸ್ತಿ ವಶಪಡಿಸಿಕೊಳ್ಳಲು ಸದ್ಯದಲ್ಲೇ ಕ್ಲೇಮ್ ಕಮೀಷನರ್ ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆಯಲಾಗಿದ್ದು, ಆದಷ್ಟು ಶೀಘ್ರ ಹೈಕೋರ್ಟ್ಗೆ ಕ್ಲೇಮ್ ಕಮೀಷನರ್ ನೇಮಕ ಮಾಡಲಾಗುವುದು. ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹೇಳಿದರು.
ಯಾರು ಗಲಭೆ ನಡೆಸಿ ಸಾರ್ವಜನಿಕ ಆಸ್ತಿ-ಪಾಸ್ತಿ, ವಾಹನಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ಹಾನಿಮಾಡಿದ್ದರೋ ಅವರಿಂದಲೇ ವಸೂಲಿ ಮಾಡಲಾಗುವುದು. ಸುಪ್ರೀಂಕೋರ್ಟ್ನ ನಿರ್ದೇಶನದಂತೆ ಈ ಪ್ರಕ್ರಿಯೆ ನಡೆಯಲಿದೆ ಎಂದರು.
ತನಿಖಾಕಾರಿ ಮೊದಲು ಸ್ಥಳದ ಮಹಜರು ನಡೆಸುತ್ತಾರೆ. ಬಳಿಕ ಯಾವ ಯಾವ ವಾಹನಗಳು ನಷ್ಟವಾಗಿವೆ. ಅವುಗಳ ದರ, ಯಾವ ವರ್ಷದಲ್ಲಿ ಖರೀದಿ ಮಾಡಲಾಗಿತ್ತು ಸೇರಿದಂತೆ ಎಲ್ಲ ಮಾಹಿತಿಯನ್ನು ಪಡೆಯುತ್ತಾರೆ. ಬಳಿಕ ಎಫ್ಐಆರ್ ಹಾಕಲಿದ್ದಾರೆ ಎಂದು ತಿಳಿಸಿದರು.
ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಪೊಲೀಸರು ಮುಕ್ತವಾಗಿ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನಿನ ಪ್ರಕಾರ ಶಿಕ್ಷೆ ನೀಡುವಂತೆ ಸರ್ಕಾರ ಸೂಚನೆ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದರು.
# ಸಿದ್ದರಾಮಯ್ಯಗೆ ತಿರುಗೇಟು:
ಬಿಜೆಪಿಯಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರ್ಎಸ್ಎಸ್ ಸಂಚು ಮಾಡುತ್ತಿದೆ ಎಂಬ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಯಡಿಯೂರಪ್ಪ ಹಾಗೂ ಸಂಘ ಬೇರೆ ಬೇರೆ ಅಲ್ಲ. ಬಿಎಸ್ವೈ ಕೂಡ ಆರ್ಎಸ್ಎಸ್ ಹಿನ್ನೆಲೆಯಿಂದಲೇ ಬಂದವರು. ಕಾಂಗ್ರೆಸ್ನಲ್ಲಿ ಹಲವು ಗುಂಪುಗಳಿದ್ದು, ಅಲ್ಲಿ ಬೇರೆ ಬೇರೆ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ.
ಸಿದ್ದರಾಮಯ್ಯ ಮೊದಲು ತಮ್ಮ ಪಕ್ಷದಲ್ಲಿರುವ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡು ನಮ್ಮ ಬಗ್ಗೆ ಮಾತನಾಡಲಿ ಎಂದು ಕಾಲೆಳೆದರು.
ಇನ್ನು ನಿನ್ನೆ ರಾಷ್ಟ್ರೀಯ ತನಿಖಾ ದಳ ಬಂಸಿರುವ ವೈದ್ಯ ಡಾ.ಅಬ್ದುಲ್ರೆಹಮಾನ್ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಇದು ಭಯೋತ್ಪಾದನಾ ಚಟುವಟಿಕೆ ವ್ಯಾಪ್ತಿಗೆ ಬರುತ್ತಿರುವುದರಿಂದ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.