ಬೆಂಗಳೂರು,ಜ.9- ಪಾದಯಾತ್ರೆ ಸಂದರ್ಭದಲ್ಲಿ ನಾವು ಮಾರ್ಗಸೂಚಿಗಳನ್ನು ಪಾಲನೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ನಾಯಕರು ಈಗ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹೆಚ್ಚಾಗುತ್ತಿರುವ ಕಾರಣ ನಾವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದೆವು. ಪ್ರಾರಂಭದಲ್ಲಿ ಪಾಲನೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಮುಖಂಡರು ಈಗ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕಿಡಿಕಾರಿದರು.
ಇಡೀ ರಾಜ್ಯಕ್ಕೆ ವೀಕೆಂಡ್ ಕಫ್ರ್ಯೂ ವಿಧಿಸಲಾಗಿದೆ. ಜನಸಾಮಾನ್ಯರಿಗೊಂದು ಕಾನೂನು, ಕಾಂಗ್ರೆಸ್ಗೆ ಒಂದು ಕಾನೂನು ಇಲ್ಲ. ಎಲ್ಲರಿಗೂ ಒಂದೇ ಕಾನೂನು. ಆದರೆ ಕಾಂಗ್ರೆಸ್ ಕಾನೂನು ಮೀರಿದೆ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ನವರನ್ನು ಜನ ಗಮನಿಸುತ್ತಿದ್ದಾರೆ. ಐದು ವರ್ಷ ಆಡಳಿತ ನಡೆಸಿದಾಗ ಕಾಂಗ್ರೆಸ್ಗೆ ಮೇಕೆದಾಟು ನೆನಪಾಗಲಿಲ್ಲ. ಅಕಾರದಲ್ಲಿದ್ದಾಗ ಮೇಕೆದಾಟು ಮರೆತಿದ್ದ ಕಾಂಗ್ರೆಸ್ ಜನರಲ್ಲಿ ಕ್ಷಮೆ ಕೇಳಬೇಕು ಎಂದರು.
ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳುವ ಸಂಪೂರ್ಣ ಅಕಾರ ಜಿಲ್ಲಾಡಳಿತಕ್ಕೆ ನೀಡಿದ್ದೇವೆ. ಯಾವ ಕ್ರಮ ಎಂದು ಬಳಿಕ ಗೊತ್ತಾಗುತ್ತದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದರು.
