ಬೆಂಗಳೂರು,ಜೂ.24– ಆನೇಕಲ್‌ನ ಮೈಲಸಂದ್ರದಲ್ಲಿ ಪುಂಡರ ಗುಂಪೊಂದು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡಿದ್ದು, ಇಂತಹ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿಯೇ ಪೊಲೀಸ್ ಇಲಾಖೆ ಇದೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಸಮಾಜದಲ್ಲಿ ಇಂತಹ ಕೃತ್ಯಗಳನ್ನು ತೀವ್ರವಾಗಿ ಪರಿಗಣಿಸಲಾಗುತ್ತದೆ ಎಂದರು.
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದ ಪ್ರಕರಣದಲ್ಲಿ ಪೊಲೀಸರ ವೈಫಲ್ಯಗಳಿವೆ ಎಂಬ ವರದಿಯ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಅದನ್ನು ಪರಿಶೀಲಿಸಿ ನಂತರ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.
ಅನಂತ ಕುಮಾರ್ ಹೆಗಡೆ ಹಲ್ಲೆ ಮಾಡಿಲ್ಲ: ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಅವರ ಬೆಂಬಲಿಗರಿಂದ ಕುಟುಂಬವೊಂದರ ಮೇಲೆ ಹಲ್ಲೆಯಾಗಿರುವ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ. ಹೆದ್ದಾರಿಯಲ್ಲಿ ಬರುವಾಗ ತಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಲಾನ್ ಮತ್ತು ಅವರ ಕುಟುಂಬದವರು ದೂರು ನೀಡಿದ್ದಾರೆ. ಅನಂತ್‌ಕುಮಾರ್ ಹೆಗಡೆ ಹಲ್ಲೆ ಮಾಡಿಲ್ಲ. ಡ್ರೈವರ್ ಹಾಗೂ ಗನ್‌ಮ್ಯಾನ್ ಹಲ್ಲೆ ಮಾಡಿದ್ದಾರೆ. ಅನಂತ ಕುಮಾರ್ ಹೆಗಡೆ ಹಲ್ಲೆಗೆ ಪ್ರಚೋದನೆ ನೀಡಿದ್ದರೆ ಎಂಬ ಬಗ್ಗೆ ಪರಿಶೀಲನೆ ನಡೆಸುವುದಾಗಿ ಪೊಲೀಸರು ತಮಗೆ ವಿವರಣೆ ನೀಡಿದ್ದಾರೆ. ತನಿಖೆಯಲ್ಲಿ ಯಾವ ಅಂಶಗಳು ಬೆಳಕಿಗೆ ಬರುತ್ತದೆ ಎಂಬುದನ್ನು ಕಾದುನೋಡುವುದಾಗಿ ಹೇಳಿದರು.
ಸರ್ಕಾರ ದಿವಾಳಿಯಾಗಿಲ್ಲ :
ಸರ್ಕಾರಿ ಕಾಮಗಾರಿಗಳಿಗೆ ಹಣ ಇಲ್ಲ ಎಂದು ನಾನು ಹೇಳಿರುವುದಾಗಿ ತಪ್ಪಾಗಿ ಅರ್ಥೈಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 4.9 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಯಾವುದಕ್ಕೂ ಹಣದ ಕೊರತೆ ಇಲ್ಲ ಎಂದರು.
ನೀರಾವರಿಗೆ 22 ಸಾವಿರ ಕೋಟಿ ರೂ., ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ. ಗಳ ಕ್ರಿಯಾಯೋಜನೆ ತಯಾರಿಸಲು ಸೂಚನೆ ನೀಡಲಾಗಿದೆ. ಇದೆಲ್ಲವನ್ನೂ ನಾನು ನನ್ನ ಭಾಷಣದಲ್ಲಿ ಉಲ್ಲೇಖಿಸಿದ್ದೇನೆ. ವೇದಿಕೆಯಲ್ಲಿ ಯಾರೋ ಮಾತನಾಡುವಾಗ ನಾನು ತಮಾಷೆಯಾಗಿ ಪ್ರತಿಕ್ರಿಯಿಸಿದ್ದೇನೆ. ನಾನು ಅಧಿಕೃತವಾಗಿ ಮಾತನಾಡುತ್ತಿದ್ದೇನೆ. ನಮ ಸರ್ಕಾರದಲ್ಲಿ ಹಣಕಾಸಿನ ತೊಂದರೆ ಇಲ್ಲ. ಆರ್ಥಿಕ ಮುಗ್ಗಟ್ಟು ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.
ಒಂದು ಕಾಮಗಾರಿ ಎಂದರೆ ವಿಸ್ತೃತ ಯೋಜನೆ ತಯಾರಿಸಬೇಕು. ಅದರಿಂದ ವಿಳಂಬವಾಗಬಹುದು, ಹಣ ಬಿಡುಗಡೆಯಲ್ಲೂ ತಡವಾಗಬಹುದು. ಅದರ ಹೊರತುಪಡಿಸಿ ಯಾವುದೇ ಹಣಕಾಸಿನ ತೊಂದರೆ ನಮ ಸರ್ಕಾರದಲ್ಲಿಲ್ಲ ಎಂದು ಸ್ಪಷ್ಟವಾಗಿ ಪುನರುಚ್ಚರಿಸುತ್ತೇನೆ ಎಂದು ಒತ್ತಿ ಹೇಳಿದರು.
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದರೆ ಮತ್ತೊಮೆ ಪುನರುಚ್ಚರಿಸುತ್ತೇನೆ. ಕೆಲ ಶಾಸಕರು ಹೇಳುತ್ತಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. 25 ಕೋಟಿ ರೂ. ಯೋಜನೆಗೆ ಹಣ ಬಿಡುಗಡೆಯಾಗಿಲ್ಲ ಎಂದು ರಾಜು ಕಾಗೆ ಹೇಳಿದ್ದಾರೆ. ಅದಕ್ಕೆ ಯೋಜನೆ ತಯಾರಿಕೆಯ ವಿಳಂಬ ಕಾರಣವೇ ಹೊರತು, ಹಣಕಾಸಿನ ಕೊರತೆ ಅಲ್ಲ.
ಮನಸ್ಸಿಗೆ ಬೇಜಾರಾದಾಗ ಕೆಲ ಮಾತುಗಳು ಬರುತ್ತವೆ. ಅದೇ ರೀತಿ ರಾಜು ಕಾಗೆ ಮಾತನಾಡಿದ್ದಾರೆ. ಅದನ್ನು ಸರಿಪಡಿಸಬಹುದು ಎಂದರು. ಇಂತಹ ವಿಚಾರಗಳಿಗೆ ಪರಮೇಶ್ವರ್ ಮುಂದಾಳತ್ವ ವಹಿಸುತ್ತಾರೆ ಎಂದು ಶಾಸಕ ಬಸವರಾಜರಾಯರೆಡ್ಡಿ ಹೇಳಿರುವ ಹೇಳಿಕೆಗೆ ‘ನಮಸ್ಕಾರ’ ಎಂದು ಪರಮೇಶ್ವರ್ ಕೈ ಮುಗಿದು ಪ್ರತಿಕ್ರಿಯಿಸಿದರು.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2025)
- ಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು
- ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಗೃಹಸಚಿವ ಪರಮೇಶ್ವರ
- ನೈರುತ್ಯ ಮುಂಗಾರು ಚೇತರಿಕೆ, ರಾಜ್ಯದ ಹಲವೆಡೆ ಮಳೆ
- 20 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಬೆಚ್ಚಿ ಬಿದ್ದ ದೆಹಲಿ