ಬೀಗ ಹಾಕಿರುವ ಮನೆಗಳಿಗೆ ರಾತ್ರಿ ವೇಳೆ ಕನ್ನ: ಮೂವರು ಕುಖ್ಯಾತ ಮನೆಗಳ್ಳರ ಸೆರೆ

Spread the love

ಬೆಂಗಳೂರು, ಮೇ 21- ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಳ್ಳತನ ಮಾಡುವ ಚಾಳಿ ಹೊಂದಿದ್ದ ಮೂವರು ಕುಖ್ಯಾತ ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ರೂ. ಮೌಲ್ಯದ 824.87 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಯಶವಂತಪುರ, ವಿನಾಯಕನಗರದ ಪೈಪ್‍ಲೈನ್ ರಸ್ತೆ ನಿವಾಸಿ ಶ್ರೀನಿವಾಸ ಅಲಿಯಾಸ್ ಸಿಲಿಂಡರ್ ಸೀನ ಅಲಿಯಾಸ್ ಕರಾಟೆ ಸೀನ (38), ದೊಡ್ಡಬಳ್ಳಾಪುರ ತಾಲ್ಲೂಕು ರಾಜಾನುಕುಂಟೆಯ ಸತೀಶ್‍ಕುಮಾರ್ ಅಲಿಯಾಸ್ ಸತೀಶ್ ಅಲಿಯಾಸ್ ಕೊಕ್ಕರೆ ಮತ್ತು ಹೊಸಕೋಟೆ
ತಾಲ್ಲೂಕು ನಂದಗುಡಿ ಹೋಬಳಿಯ ಶಿವನಪುರ ನಿವಾಸಿ ರಾಜಣ್ಣ ಅಲಿಯಾಸ್ ಕರಡಿ (38) ಬಂಧಿತ ಆರೋಪಿಗಳು.

ಆರೋಪಿ ಶ್ರೀನಿವಾಸನ ವಿರುದ್ಧ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 26 ಪ್ರಕರಣಗಳು ದಾಖಲಾಗಿರುತ್ವೆ. ಮತ್ತೊಬ್ಬ ಆರೋಪಿ ಸತೀಶನ ವಿರುದ್ಧ ನಗರದ ವಿಧ ಠಾಣೆಗಳಲ್ಲಿ 20 ಪ್ರಕರಣಗಳು ದಾಖಲಾಗಿದ್ದರೆ, ರಾಜಣ್ಣನ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಂದಗುಡಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತವೆ.

ಮುನೇಶ್ವರ ಲೇಔಟ್ ನಿವಾಸಿ ಸುಬ್ಬಾರಾವ್ ಎಂಬುವವರಿಗೆ ಸೇರಿದ ಚಿನ್ನದ ಆಭರಣಗಳು ಕಳ್ಳತನವಾಗಿರುವ ಬಗ್ಗೆ ಹಾಗೂ ವಿದ್ಯಾರಣ್ಯಪುರದ ದೇವಪ್ಪ ಲೇಔಟ್‍ನ ಅನಿನಾ ಎಂಬುವವರಿಗೆ ಸೇರಿದ ಚಿನ್ನದ ಆಭರಣಗಳು ಹಾಗೂ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದ ಭದ್ರಪ್ಪ ಲೇಔಟ್‍ನ ಪವನ್ ಎಂಬುವವರಿಗೆ ಸೇರಿದ ಚಿನ್ನದ ಆಭರಣಗಳು ಕಳುವಾಗಿರುವ ಬಗ್ಗೆ ದೂರು ದಾಖಲಾಗಿದ್ದವು.

ಯಲಹಂಕ ಉಪವಿಭಾಗದ ಎಸಿಪಿ ಮನೋಜ್‍ಕುಮಾರ್ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಅನಿಲ್‍ಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪತ್ತೆ ಹಚ್ಚಿ ಮೂವರನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳಿಂದ ವಿದ್ಯಾರಣ್ಯಪುರ ಠಾಣೆಯ ಪ್ರಕರಣದಲ್ಲಿ ಕಳುವಾಗಿದ್ದ 150 ಗ್ರಾಂ ಚಿನ್ನಾಭರಣ, ಇದೇ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಪ್ರಕರಣದಲ್ಲಿ 626.35 ಗ್ರಾಂ ಚಿನ್ನಾಭರಣ ಮತ್ತು ಕೊಡಿಗೇಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 48.52 ಗ್ರಾಂ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Facebook Comments