ಹನಿಟ್ರ್ಯಾಪ್ ಗ್ಯಾಂಗ್ ಅಂದರ್ : ಇಬ್ಬರು ಮಹಿಳೆಯರು ಸೇರಿ, 10 ಮಂದಿ ಅರೆಸ್ಟ್

Social Share

ಬೆಂಗಳೂರು, ನ.5- ಹಣದ ನೆಪವೊಡ್ಡಿ ಕೋರ್ಟ್ ಉದ್ಯೋಗಿಯೊಬ್ಬರನ್ನು ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್ ಮಾಡಿದ್ದ ಇಬ್ಬರು ಮಹಿಳೆಯರು ಸೇರಿದಂತೆ 10 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಿದರಕಲ್ಲು ಶಿವಗಂಗಾ ಲೇಔಟ್ ನಿವಾಸಿ ಸಿದ್ದೇಶ್ ಅಲಿಯಾಸ್ ಸಿದ್ದು (26), ಗೊಲ್ಲರಹಟ್ಟಿ , ಪೈಪ್ಲೈನ್ ರಸ್ತೆ ನಿವಾಸಿ ಅನುರಾಧಾ (25), ಕಾಮಾಕ್ಷಿಪಾಳ್ಯದ ಗುಣ (23), ಇಂದಿರಾನಗರದ ಚೇತನ್ ಅಲಿಯಾಸ್ ಚೇತು (19), ಗಂಗೋನಹಳ್ಳಿಯ ರವಿಕುಮಾರ್ ಅಲಿಯಾಸ್ ಬಾಂಡ್ (25), ಶ್ರೀರಾಮಪುರದ ಪ್ರಶಾಂತ್ಕುಮಾರ್ ಅಲಿಯಾಸ್ ಪ್ರಶಾಂತ್ (19), ಕಾಮಾಕ್ಷಿಪಾಳ್ಯದ ಕಾರ್ತಿಕ್ ಕುಮಾರ್ (22), ಅಂಧ್ರಹಳ್ಳಿ ಮುಖ್ಯರಸ್ತೆಯ ಉಮಾಶಂಕರ್, ಮೀನಾಕ್ಷಿ ನಗರದ ಸೂರ್ಯರಾಜ್ ಅರಸ್ ಅಲಿಯಾಸ್ ಸೂರ್ಯ (20) ಮತ್ತು ಮಲ್ಲತ್ತಹಳ್ಳಿಯ ವಿದ್ಯಾ ಅಲಿಯಾಸ್ ಕಾವ್ಯ (35) ಬಂಧಿತರು.

ಯಶವಂತಪುರದ ನಿವಾಸಿ ಜಯರಾಮ್ (55) ಎಂಬುವವರು ಕೋರ್ಟ್ನಲ್ಲಿ ಜಮೇದಾರ್ ಆಗಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳ ಹಿಂದೆ ಕೋರ್ಟ್ನಲ್ಲಿನ ಪ್ರಕರಣಕ್ಕೆ ಬಂದಿದ್ದ ಆರೋಪಿಅನುರಾಧಾ ಪರಿಚಯವಾಗಿದ್ದಾರೆ. ಆರು ತಿಂಗಳ ಹಿಂದೆ ತಾವರೆಕೆರೆಯಲ್ಲಿ ವಾಸವಾಗಿದ್ದರು.

ಕೋರ್ಟ್ ಬಳಿ ಬಂದ ಅನುರಾಧಾ ತಮ್ಮ ಮನೆಯಲ್ಲಿ ಕರೆಂಟ್ ಶಾರ್ಟ್ ಸಕ್ರ್ಯೂಟ್ ಆಗಿ ಟಿವಿ, ಫ್ರಿಡ್ಜ್, ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ ಎಂದು 10 ಸಾವಿರ ಹಣವನ್ನು ಪಡೆದು ಕಳೆದ ಅ.10ರಂದು ವಾಪಸ್ ನೀಡಿದ್ದರು. ಮತ್ತೆ ಅ.25ರಂದು 5 ಸಾವಿರ ಸಾಲ ಕೇಳಿದ್ದರು. ಆಗ ತಮ್ಮ ಬಳಿ ಹಣ ಇರಲಿಲ್ಲ. ಹಾಗಾಗಿ ಅ.30ರಂದು ಕೊಡುವುದಾಗಿ ಹೇಳಿ ಕಳುಹಿಸಿದ್ದಾರೆ.


ಅ.30ರಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ಅನು ತಿಳಿಸಿದ ವಿಳಾಸಕ್ಕೆ ಜಯರಾಮ್ ಹೋಗಿ ಅವರಿಗೆ ಹಣ ನೀಡಿ ವಾಪಸ್ ಹೊರಗೆ ಬಂದು ಗಾಡಿ ತೆಗೆಯುತ್ತಿರುವಾಗ ಅಪರಿಚಿತ ನಾಲ್ವರು ಬಂದು ಬೈಕ್ ಕೀ ಕಿತ್ತುಕೊಂಡು ಬಾಯಿ ಮುಚ್ಚಿ, ಮನೆಯ ಒಳಗೆ ಎಳೆದೊಯ್ದಿದ್ದಾರೆ.

ಆ ಪೈಕಿ ಒಬ್ಬ ಜಯರಾಮ್ ತಲೆಗೆ ಹೊಡೆದು ಮತ್ತೊಬ್ಬ ಕೈ ಮುಷ್ಠಿಯಿಂದ ಕಣ್ಣಿನ ಭಾಗಕ್ಕೆ ಹೊಡೆದಿದ್ದಾನೆ. ಇನ್ನೊಬ್ಬ ಎಡಭಾಗದ ಕಿವಿಗೆ ಹೊಡೆದು ಮಾಧ್ಯಮದವರನ್ನು ಕರೆಸಿ ನಿನ್ನ ಮಾನ ಹರಾಜು ಹಾಕುತ್ತೇವೆಂದು ಹೇಳಿ 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಹಣ ಕೊಡಲು ಜಯರಾಮ್ ಒಪ್ಪದಿದ್ದಾಗ ಎಡಭಾಗದ ಕಣ್ಣಿಗೆ ಹಾಗೂ ತಲೆಗೆ ಹೊಡೆದಾಗ ಅವರು ಪ್ರಜ್ಞೆ ತಪ್ಪಿದ್ದಾರೆ.ತದನಂತರ ನೀರು ಹಾಕಿ ಜಯರಾಮ್ ಅವರನ್ನು ಎಚ್ಚರಿಸಿ ಆವರ ಮೊಬೈಲ್ನಿಂದಲೇ ಹೆಂಡತಿ ಮತ್ತು ಮಕ್ಕಳಿಗೆ ಕರೆ ಮಾಡಿ ನನ್ನ ಹೆಂಡತಿಯನ್ನು ಅತ್ಯಾಚಾರ ಮಾಡಲು ಬಂದಿದ್ದಾನೆ, ನೀವು ಬನ್ನಿ ಎಂದು ಹೇಳಿ 5 ಸಾವಿರ ಕಿತ್ತುಕೊಂಡು ಆರೋಪಿಗಳು ಅಲ್ಲಿಂದ ಕಳುಹಿಸಿದ್ದರು.

ಜಯರಾಮ್ ಅವರು ಮನೆಗೆ ವಾಪಸ್ ಬಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ನಡೆದ ಘಟನೆ ಬಗ್ಗೆ ವಿವರಿಸಿ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇಬ್ಬರು ಮಹಿಳೆಯರು ಸೇರಿ 10 ಮಂದಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ವಿವಿಧ ಮೊಬೈಲ್ ಫೋನ್ಗಳನ್ನು ಹಾಗೂ 1500ರೂ. ವಶಪಡಿಸಿಕೊಂಡಿದ್ದಾರೆ.

ಜಯರಾಮ್ ಅವರನ್ನು ಆರೋಪಿತೆ ಅನುರಾಧ ಪರಿಚಯ ಮಾಡಿಕೊಂಡು ಮೊಬೈಲ್ನಲ್ಲಿ ಮಾತನಾಡುತ್ತ, ಅವರನ್ನು ಪುಸಲಾಯಿಸಿ ಮನೆಗೆ ಕರೆಸಿಕೊಂಡು ಸಲುಗೆಯಿಂದ ಇದ್ದ ಸಮಯದಲ್ಲಿ ಆರೋಪಿತೆ ವಿದ್ಯಾ ಸೂಚನೆಯಂತೆ ಉಳಿದ ಆರೋಪಿಗಳು ಮನೆ ಒಳಗೆ ಪ್ರವೇಶಿಸಿ ಜಯರಾಮ್ ಮೇಲೆ ಹಲ್ಲೆ ಮಾಡಿ 2 ಲಕ್ಷಕ್ಕೆ ಬೇಡಿಕೆ ಇಟ್ಟು 5 ಸಾವಿರ ಹಣ ಸುಲಿಗೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಮೊದಲನೆ ಆರೋಪಿ ಸಿದ್ದೇಶ್ ವಿರುದ್ಧ ಕ್ಯಾತಸಂದ್ರ, ಮಾದನಾಯಕನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತವೆ. ಇನ್ಸ್ಪೆಕ್ಟರ್ ಲೋಹಿತ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article