ಹನಿಟ್ರ್ಯಾಪ್ ಮೂಲಕ ವೈದ್ಯನನ್ನ ಸುಲಿಗೆ ಮಾಡಿದ್ದವರಿಗಾಗಿ ಶೋಧ

ಬೆಂಗಳೂರು, ಮೇ 27- ವಂಚಿಸಿದ ಹಣ ಕೇಳಿದ್ದಕ್ಕೆ ವೈದ್ಯರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿಕೊಂಡು 50 ಲಕ್ಷ ರೂ. ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಇನ್ನು ಮೂರ್ನಾಲ್ಕು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು , ಅವರುಗಳ ಹುಡುಕಾಟ ಮುಂದುವರೆದಿದೆ. ಕಲಬುರಗಿ ಮೂಲದ ವೈದ್ಯರೊಬ್ಬರು ಕಿಡಿಗೇಡಿಗಳ ಸಂಚಿಗೊಳಗಾಗಿ ಹಣವೂ ಕಳೆದುಕೊಂಡು, ಮುಜುಗರಕ್ಕೊಳಗಾಗಿ ಇದೀಗ ಪೊಲೀಸರ ಮೊರೆ ಹೋಗಿರುವ ಹಿನ್ನೆಲೆಯಲ್ಲಿ, ಸಿಸಿಬಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಕೈಗೊಂಡು ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿ ಹಲವು ವಿವರಗಳನ್ನು ಕಲೆ ಹಾಕಿದ್ದಾರೆ.

ಮಗನಿಗೆ ಹೇಗಾದರೂ ಮಾಡಿ ವೈದ್ಯಕೀಯ ಸೀಟು ಕೊಡೆಸಬೇಕೆಂಬ ವೈದ್ಯರ ಭಾವನೆಗಳೊಂದಿಗೆ ಚೆಲ್ಲಾಟವಾಡಿ 66 ಲಕ್ಷ ರೂ. ಪಡೆದು ಸೀಟು ಕೊಡಿಸದೆ ಹಣವೂ ಹಿಂದಿರುಗಿಸದೆ ವಂಚಿಸಿದಲ್ಲದೆ, ಮತ್ತಷ್ಟು ಹಣ ಪೀಕುವ ದುರುದ್ದೇಶದಿಂದ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸುವ ಹೀನಕೃತ್ಯಕ್ಕಿಳಿದು ತಲೆ ಮರೆಸಿಕೊಂಡಿರುವ ಉಳಿದವರಿಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.

ಹನಿಟ್ರ್ಯಾಪ್‍ನ ಸುಳಿಗೆ ಸಿಕ್ಕಿ ಹೊರ ಬರಲಾಗದ ವೈದ್ಯ ತನ್ನ ಮನೆಯನ್ನು ಬ್ಯಾಂಕ್‍ಗೆ ಅಡಮಾನವಿಟ್ಟು , 50 ಲಕ್ಷ ಸಾಲ ಪಡೆದು ಆ ಹಣವನ್ನು ವಂಚಕರ ಕೈಗಿಟ್ಟಿದ್ದರೂ, ಅವರಿಗೆ ಸಮಾಧಾನವಾಗಿಲ್ಲ. ಮತ್ತೆ ಸಬೂಬು ಹೇಳುತ್ತಾ 20 ಲಕ್ಷ ಹಣಕ್ಕೆ ಪೀಡಿಸುತ್ತಾ ವೈದ್ಯನ ನೆಮ್ಮದಿ ಹಾಳು ಮಾಡಿದ ವಂಚಕರಿಗಾಗಿ ಸಿಬಸಿಬಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.