ಹನಿಟ್ರ್ಯಾಪ್ : ಯುವತಿ ಸೇರಿ ಮೂವರ ಬಂಧನ

ಬೆಂಗಳೂರು, ಅ.11- ತರಕಾರಿ ವ್ಯಾಪಾರಿಯ ಪರಿಚಯ ಮಾಡಿಕೊಂಡು ಸ್ನೇಹದಿಂದ ಮಾತನಾಡಿಸಿ ಆತನ ವಿಶ್ವಾಸ ಗಳಿಸಿ ಹನಿಟ್ರ್ಯಾಪ್ ಮೂಲಕ ಹಣ, ಕಾರು, ಮೊಬೈಲ್ ದೋಚಿದ್ದ ಯುವತಿ ಸೇರಿ ಮೂವರನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 16 ಸಾವಿರ ಹಣ, ಎಟಿಎಂ ಕಾರ್ಡ್, ಕಾರು, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಘಟನೆ ವಿವರ: ಸೆ.29ರಂದು ಮಳೆ ಬರುತ್ತಿದ್ದಾಗ ಯುವತಿಯೊಬ್ಬಳು ತರಕಾರಿ ಅಂಗಡಿ ಬಳಿ ಬಂದು ವ್ಯಾಪಾರಿಯ ಪರಿಚಯ ಮಾಡಿಕೊಂಡು ಸಲುಗೆಯಿಂದಲೇ ಮಾತನಾಡಿಸಿದ್ದಾಳೆ. ನಂತರ ತಮ್ಮ ತಮ್ಮ ಮೊಬೈಲ್ ನಂಬರ್‍ಗಳನ್ನು ವಿನಿಮಯ ಮಾಡಿಕೊಂಡು ಮಾತನಾಡುತ್ತಿದ್ದರು. ನಂತರ ಚಾಟಿಂಗ್ ಮಾಡುತ್ತ ಇಬ್ಬರ ಮಧ್ಯೆ ಸಂಬಂಧ ದೀರ್ಘವಾಗಿ ಬೆಳೆದಿದೆ.

ಇವರಿಬ್ಬರು ಒಂದು ಕಡೆ ಸಿಗೋಣ ಎಂದು ಹೇಳಿ ಮಾತನಾಡಿಕೊಂಡಿದ್ದರು. ಅದರಂತೆ ಅ.6ರಂದು ಯುವತಿ ಹಾಗೂ ವ್ಯಾಪಾರಿ ಹೊರಗೆ ಹೋಗಿ ಒಂದು ರೂಮಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಹುಡುಗಿ ಕಡೆಯ ಇಬ್ಬರು ಬಂದು ನಮ್ಮ ಹುಡುಗಿಯನ್ನು ಕರೆದುಕೊಂಡು ಬಂದಿದ್ದೀಯ ಎಂದು ಹೆದರಿಸಿ ವ್ಯಾಪಾರಿಗೆ ಹಣ ಕೇಳಿದ್ದಾರೆ.

ನಂತರ ಆತನ ಬಳಿ ಇದ್ದ 5 ಸಾವಿರ ಹಣ, ಕಾರು, ಮೊಬೈಲ್ ಕಿತ್ತುಕೊಂಡಿದ್ದಲ್ಲದೆ ಫೋನ್ ಪೇ ಮೂಲಕ 32 ಸಾವಿರ ಹಾಕಿಸಿಕೊಂಡು ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ತಾನು ಮೋಸ ಹೋದ ಬಗ್ಗೆ ಅರಿವಾಗಿ ಮೈಕೋ ಲೇಔಟ್ ಠಾಣೆಗೆ ತರಕಾರಿ ವ್ಯಾಪಾರಿ ದೂರು ನೀಡಿದ್ದಾರೆ.

ವ್ಯಾಪಾರಿ ನೀಡಿದ ದೂರಿನನ್ವಯ ಮೊಬೈಲ್ ನಂಬರ್ ಮುಖಾಂತರ ಹುಡುಗಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ಜಾಲ ಎಂಬುದನ್ನು ಪತ್ತೆಹಚ್ಚಿ ತೀವ್ರ ವಿಚಾರಣೆಗೊಳಪಡಿಸಿ ಈಕೆಯ ಜತೆಗಾರರಾದ ಇನ್ನಿಬ್ಬರನ್ನು ಬಂಸಿ 16 ಸಾವಿರ ಹಣ, ಎಟಿಎಂ ಕಾರ್ಡ್, ಕಾರು ಹಾಗೂ ಕೃತತ್ಯಕ್ಕೆ ಬಳಸಿದ್ದ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಈ ಜಾಲದಲ್ಲಿ ಇನ್ನೂ ಹಲವರು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದ್ದು, ಯುವತಿ ಹಾಗೂ ಯುವಕರ ಹಿನ್ನೆಲೆ ಬಗ್ಗೆ ಸುದೀರ್ಘವಾಗಿ ಮೈಕೋ ಲೇಔಟ್ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.