ಮಹಿಳಾ ಅಧಿಕಾರಿಯೊಬ್ಬರು ವ್ಯಕ್ತಿಯನ್ನು ಬಂದೂಕಿನಿಂದ ಶೂಟ್ ಮಾಡಿ ಸಾಯಿಸುವ ಮೂಲಕ ಚಿತ್ರದ ಮೊದಲ ದೃಶ್ಯ ಶುರುವಾಗುತ್ತದೆ. ಆ ದೃಶ್ಯವೇ ಚಿತ್ರದ ಲೀಡ್. ಏತಕ್ಕಾಗಿ ಆ ಕೊಲೆ ನಡೆದಿದೆ ಎಂಬುದಕ್ಕೆ ನಿರ್ದೇಶಕರು ಕಥೆಯನ್ನು ತೋರಿಸಲು ಶುರು ಮಾಡುತ್ತಾರೆ ಅದೇ ಈ ವಾರ ಬಿಡುಗಡೆಯಾದ ಹೋಪ್ ಚಿತ್ರದ ಒನ್ ಲೈನ್ ಸ್ಟೋರಿ.
ಭೂ ಸ್ವಾೀಧಿನ ಅಧಿಕಾರಿಯಾಗಿ, ಮಹಿಳಾ ಅಧಿಕಾರಿ ನೇಮಕವಾಗಿರುತ್ತದೆ. ಇನ್ನೂ ಆ ಹುದ್ದೆಗೆ ಬಂದು ಏಳೆಂಟು ತಿಂಗಳು ಮಾತ್ರ ಕಳೆದಿರುವಾಗಲೇ ಬೇರೊಂದು ಇಲಾಖೆಗೆ ಟ್ರಾನ್ಸ್‍ಫರ್ ಆಗುತ್ತದೆ. ಎರಡು ವರ್ಷ ಸೇವಾ ಅವಧಿ ಮುಗಿಯದೆ ವರ್ಗಾವಣೆ ಮಾಡುವ ಹಾಗಿಲ್ಲ ಎಂದು ಸರ್ಕಾರದ ನಿಯಮ ಇದ್ದರೂ ನಿಯಮ ಮೀರಿ, ಭ್ರಷ್ಟ ಮನಸ್ಥಿತಿಯ ರಾಜಕಾರಣಿಗಳ ಕೃಪಾಪೋಷಿತ, ಭ್ರಷ್ಟ ಅಧಿಕಾರಿಗಳ ದುರಾಸೆಯಿಂದ ಮಹಿಳಾ ಅಧಿಕಾರಿಯನ್ನು ಎತ್ತಂಗಡಿ ಮಾಡಲಾಗುತ್ತದೆ.
ಇದನ್ನು ಪ್ರಶ್ನಿಸಿ ಮಹಿಳಾ ಕೆಎಎಸ್ ಅಧಿಕಾರಿ ಶಿವಾನಿ ಕೆಎಟಿ ಮೆಟ್ಟಿಲೇರುತ್ತಾಳೆ. ಅಲ್ಲಿಯೂ ನ್ಯಾಯ ಸಿಗದೆ ಹೈಕೋರ್ಟ್‍ಗೆ ನಂತರ ಸುಪ್ರೀಂಕೋರ್ಟ್‍ಗೆ ಮೊರೆ ಹೋಗುತ್ತಾಳೆ. ಅಲ್ಲಿ ಆಕೆಗೆ ನ್ಯಾಯ ಸಿಗುತ್ತಾ..? ಹೋರಾಟದ ಪರಿ ಹೇಗಿರುತ್ತದೆ..? ವ್ಯವಸ್ಥೆ ಸನ್ನಿವೇಶಗಳು ಯಾವ ಮಟ್ಟಿಗೆ ಎದುರಾಗಿ ಕಾಣಿಸುತ್ತವೆ?, ಬೆದರಿಸುತ್ತವೆ ಅನ್ನುವುದೇ ಹೋಪ್ ಚಿತ್ರದ ಕಥಹಂದರ.
ಹೋಪ್ ಮಹಿಳಾ ಪ್ರಧಾನವಾಗಿದ್ದು, ಕಥೆಯ ವಸ್ತುಗೆ ಪ್ರಾಧಾನ್ಯತೆ ಕೊಟ್ಟು ಸರ್ಕಾರಿ ಇಲಾಖೆಗಳಲ್ಲಿ ವರ್ಗಾವಣೆ ದಂಧೆ, ಅದರಲ್ಲೂ ಲಾಭದಾಯಕ ಇಲಾಖೆಗಳಲ್ಲಿ ಅಧಿಕಾರಿಗಳು ಹೋಗಬೇಕಾದಾಗ ಯಾವ ಪ್ರಮಾಣದಲ್ಲಿ ಲಂಚಾವತಾರದ ಆರ್ಭಟವಿರುತ್ತದೆ ಎಂಬುದನ್ನು ನಿರ್ದೇಶಕ ಅಂಬರೀಶ್ ಎಂ. ಸ್ಪಷ್ಟವಾಗಿ ಪ್ರೇಕ್ಷಕರಿಗೆ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಪ್ರಾಮಾಣಿಕ ದಕ್ಷ ಮತ್ತು ಬ್ಯಾಕ್‍ರೌಂಡ್ ಇಲ್ಲದ ನಿಸ್ಸಹಾಯಕ ಅಧಿಕಾರಿಯ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ.
ವಕೀಲರಾಗಿ ಅಭಿನಯಿಸಿರುವ ಪ್ರಕಾಶ್ ಬೆಳವಾಡಿ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಎಲ್ಲರ ಗಮನ ಸೆಳೆಯುತ್ತಾರೆ. ಇದು ಪಕ್ಕಾ ಕಂಟೆಂಟ್ ಓರಿಯೆಂಟೆಡ್ ಚಿತ್ರ ಆಗಿರುವುದರಿಂದ ಅಬ್ಬರತೆಗೆ, ರೋಮ್ಯಾಂಟಿಕ್ ದೃಶ್ಯಗಳಿಗೆ ಜಾಗವಿಲ್ಲ. ಎಷ್ಟೇ ಓದಿ ಅಧಿಕಾರಿಯಾದರೂ ರಾಜಕಾರಣಿಗಳು ಮತ್ತು ಭ್ರಷ್ಟ ಆಡಳಿತ ವ್ಯವಸ್ಥೆಗೆ ಸಿಕ್ಕಿ ಕಾಲ್ ಚೆಂಡಿನಂತಾಗುತ್ತಾರೆ ಎಂಬುದನ್ನು ತಿಳಿಯಲು ಹೋಪ್ ಚಿತ್ರವನ್ನು ಒಮ್ಮೆ ನೋಡಲೇಬೇಕು.