ತೋಟಗಾರಿಕೆ ಬೆಳೆಗಳ ಬೆಲೆ ಕುಸಿತವಾಗಿಲ್ಲ :ಸಚಿವ ಆರ್.ಶಂಕರ್

ರಾಮನಗರ, ಜೂ.12-ಟೊಮೊಟೋ ಹೊರತು ಪಡಿಸಿ ತರಕಾರಿ ಹಾಗೂ ಹಣ್ಣುಗಳ ಬೆಲೆ ಕುಸಿತವಾಗಿಲ್ಲ ಎಂದು ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಆರ್. ಶಂಕರ್ ಅವರು ತಿಳಿಸಿದರು. ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮಾತನಾಡಿದ ಅವರು ಕೋವಿಡ್ ಮೊದಲನೇ ಅಲೆಯಲ್ಲಿ ತರಕಾರಿ ಹಾಗೂ ಹಣ್ಣುಗಳಿಗೆ ಉತ್ತಮ ಬೆಲೆ ದೊರತಿರಲಿಲ್ಲ.ಆದರೆ, ಕೋವಿಡ್ ಎರಡನೇ ಅಲೆಯಲ್ಲಿ ಅಂತಹ ತೊಂದರೆಯಾಗಿಲ್ಲ ಎಂದರು.

ಅಧಿಕಾರಿಗಳು ಜಿಲ್ಲಾವಾರು ಹಾಗೂ ತಾಲ್ಲೂಕುವಾರು ನೋಡಲ್ ಅಧಿಕಾರಿಗಳನ್ನು ಮಾಡಿಕೊಂಡು ಎಲ್ಲಾ ಕಡೆ ಖರೀದಿದಾರರು ಹಾಗೂ ರೈತರೊಂದಿಗೆ ಸಂಪರ್ಕ ಕಲ್ಪಿಸಿ ತರಕಾರಿ ಹಾಗೂ ಹಣ್ಣಿನ ಬೆಲೆ ಕುಸಿಯದಂತೆ ನೋಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಹೂ, ಹಣ್ಣು ಬೆಳೆಗಾರರಿಗೆ ಸರ್ಕಾರ ಸುಮಾರು 82 ಕೋಟಿ ರೂ. ಪ್ಯಾಕೇಜ್ ಘೋಷಣೆ ಸಹ ಮಾಡಿದೆ. ಪ್ರತಿ ಹೆಕ್ಟೇರ್‌ಗೆ 10000 ರೂ.ನಂತೆ ಸಹಾಯಧನ ನೀಡಲಾಗುತ್ತಿದೆ. ಈ ಬಾರಿ ರೇಷ್ಮೆಗೆ ಅಂತಹ ತೊಂದರೆಯಾಗಿಲ್ಲ. ಕೆಲವು ದಿನಗಳು ಮಾತ್ರ ಬೆಲೆ ಕುಸಿದಿತ್ತು. ಈಗ ಬಹಳ ಒಳ್ಳೆಯ ದರ ದೊರೆಯುತ್ತಿದೆ ಇದು ಸಂತೋಷದ ವಿಷಯವಾಗಿದೆ ಎಂದರು.

ಕಳೆದ ಬಾರಿ 30 ರೂ.- 50 ರೂ. ಸಹಾಯಧನ ರೇಷ್ಮೆ ಬೆಳೆಗಾರರಿಗೆ ನೀಡಲಾಗಿತ್ತು. ಶೇ.90 ಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರಿಗೆ ಪಾವತಿಯಾಗಿದೆ. ಕೆಲವು ಕಡೆ ಬ್ಯಾಂಕ್ ಖಾತೆ ಸಂಖ್ಯೆ ಸರಿಯಾಗಿ ನೀಡದ ಕಡೆ ಪಾವತಿಯಾಗಿಲ್ಲ. ಈಗಲೂ ಸಹ ಸಭೆ ಕರೆದು ಅಂತಹ ರೇಷ್ಮೆ ಬೆಳೆಗಾರರಿಂದ ಮಾಹಿತಿ ಪಡೆದು ಪಾವತಿಸುವಂತೆ ತಿಳಿಸಲಾಗಿದೆ. ಈ ಬಾರಿ ರೇಷ್ಮೆಗೆ ಒಳ್ಳೆಯ ಬೆಲೆಯಿದ್ದು, ಸಹಾಯಧನ ನೀಡುವ ಯೋಜನೆ ಸರ್ಕಾರದ ಮುಂದೆ ಇರುವುದಿಲ್ಲ ಎಂದು ಹೇಳಿದರು.

ಸಾವಯವ ಬೆಳೆಗೆ ಅದ್ಯತೆ ನೀಡಿ: ಸಾವಯವ ಆಹಾರ ಸೇವಿಸುವುದು ಆರೋಗ್ಯಕರ ಆಹಾರ ಪದ್ಧತಿಯಾಗಿದ್ದು, ಇದನ್ನು ಸಾರ್ವಜನಿಕರು ಹೆಚ್ಚಾಗಿ ಬಳಸಲು ಮುಂದಾಗುತ್ತಿದ್ದಾರೆ. ಸಾವಯವ ಬೆಳೆಗೆ ಉತ್ತಮ ಬೆಲೆ ಸಿಗಬೇಕಾದರೆ ಅವುಗಳನ್ನು ಗುರುತಿಸಿ ಪ್ರಮಾಣಿಕರಸಬೇಕಿದೆ ಎಂದು ಸಚಿವರು ತಿಳಿಸಿದರು.

ಗ್ರಾಹಕರು ಸಾವಯವ ಬೆಳೆಗಳು ಎಂದು ನಂಬಿ ರಾಸಯನಿಕ ಬಳಸಿ ಬೆಳೆದಿರುವ ಆಹಾರ ಪದಾರ್ಥ ಎಂದು ಖರೀದಿಸಿ ಮೋಸ ಹೋಗಬಾರದು.ಸಾವಯವ ಬೆಳೆಗಳನ್ನು ಗುರುತಿಸಿ ಪ್ರಮಾಣಿಕರಿಸಲು ಪ್ರಯೋಗಾಲಯದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಸಾವಯವ ಬೆಳೆಯನ್ನು ಪ್ರಮಾಣಿಕರಿಸುವ ಕೆಲಸ ಇಲಾಖೆಯಿಂದ ನಡೆಸಲು ಚಿಂತಿಸಲಾಗುತ್ತಿದೆ ಎಂದರು.