ಬೆಂಗಳೂರಿಗರಿಗೆ ಮತ್ತೊಂದು ಬಿಗ್ ಶಾಕ್..! ಹೋಟೆಲ್‌ಗಳಿಗೆ ಹೋಗೋ ಮುನ್ನ ಈ ಸುದ್ದಿ ಓದಿ

ಬೆಂಗಳೂರು, ಫೆ.5-ಹಾಲು, ವಿದ್ಯುತ್ ದರ ಏರಿಕೆಯ ಬೆನ್ನಲ್ಲೇ ಬೆಂಗಳೂರು ನಾಗರಿಕರಿಗೆ ಹೊಟೇಲ್ ತಿಂಡಿ-ತಿನಿಸುಗಳ ಬೆಲೆ ಕೂಡ ಏರಿಕೆಯಾಗುವ ಮೂಲಕ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಬೃಹತ್ ಬೆಂಗಳೂರು ಹೊಟೇಲ್ ಸಂಘ ಮತ್ತೊಂದು ಶಾಕ್ ನೀಡಿದೆ. ಎಲ್ಲಾ ತಿಂಡಿ-ತಿನಿಸು ಮತ್ತು ಪಾನೀಯಗಳ ಬೆಲೆಯಲ್ಲಿ ಶೇ.5ರಷ್ಟು ಸರಾಸರಿ ಏರಿಕೆಯಾಗಲಿದೆ ಎಂದು ಹೊಟೇಲ್‍ಗಳ ಸಂಘ ತಿಳಿಸಿದೆ.

ಹಲವಾರು ದಶಕಗಳಿಂದ ಹೊಟೇಲ್‍ಗಳ ತಿಂಡಿ-ತಿನಿಸುಗಳ ಬೆಲೆ ಪರಿಷ್ಕರಣೆಯಾಗಿಲ್ಲ. ನ್ಯಾಯೋಚಿತವಾದ ಕೈಗೆಟುಕವ ದರದಲ್ಲಿ ಗ್ರಾಹಕರಿಗೆ ತಿಂಡಿ-ತಿನಿಸುಗಳನ್ನು ಒದಗಿಸುತ್ತಿದ್ದೇವೆ. ಇತ್ತೀಚೆಗೆ ಹೊಟೇಲ್ ಉದ್ಯಮವೂ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಅವಶ್ಯಕ ವಸ್ತುಗಳ ಬೆಲೆಗಳು ನಿಯಂತ್ರಣವಿಲ್ಲದೆ ಗಗನಕ್ಕೇರುತ್ತಿವೆ. ಹಾಲು, ಮೊಸರು, ತರಕಾರಿ, ಎಣ್ಣೆ, ಬೇಳೆಕಾಳು, ಗ್ಯಾಸ್‍ನ ಬೆಲೆ ಅನಿಯಂತ್ರಿತವಾಗಿ ಬೆಲೆ ಕಂಡಿದೆ.

ಕಟ್ಟಡದ ಬಾಡಿಗೆ, ವಿದ್ಯುತ್, ಮತ್ತು ನೀರಿನ ದರಗಳು ಏರಿಕಯಾಗಿವೆ. ಈ ಎಲ್ಲ ಹೊರೆಗಳ ನಡುವೆಯೂ ಹತ್ತಾರು ವರ್ಷಗಳಿಂದ ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸಲಾಗಿರಲಿಲ್ಲ. ಆದರೆ ಈಗ ಅನಿವಾರ್ಯ ಪರಿಸ್ಥಿತಿ ಇದೆ. ಬೆಲೆ ಏರಿಕೆ ಮಾಡಲೇಬೇಕಿದೆ. ಇದರಿಂದ ಗ್ರಾಹಕರಿಗೆ ಸಣ್ಣ ಪ್ರಮಾಣದ ಹೊರೆಯಾದರೂ ಕೂಡ ಸಹಕಾರ ನೀಡಬೇಕು ಎಂದು ಸಂಘದ ಅಧ್ಯಕ್ಷ ಪಿ.ಸಿ.ರಾವ್, ಕಾರ್ಯದರ್ಶಿ ಎಚ್.ಎ.ಸುಬ್ರಹ್ಮಣ್ಯ ಹೊಳ್ಳ, ಖಜಾಂಚಿ ವೀರೇಂದ್ರ ಎನ್.ಕಾಮತ್ ಮನವಿ ಮಾಡಿದ್ದಾರೆ.

ಈಗಾಗಲೇ ಸಾಕಷ್ಟು ಬೆಲೆಗಳ ಏರಿಕೆಯಿಂದ ಜನಜೀವನ ತತ್ತರಿಸಿ ಹೋಗಿದೆ. ಪೆಟ್ರೋಲ್, ಡೀಸಲ್,ತರಕಾರಿ, ಹಣ್ಣುಗಳು, ಈರುಳ್ಳಿ, ದವಸಧಾನ್ಯಗಳ ಬೆಲೆಗಳು ಕೈಗೆಟಕದ ರೀತಿಯಲ್ಲಿ ಹೆಚ್ಚಳವಾಗಿವೆ. ಇಂತಹ ಸಂದರ್ಭದಲ್ಲಿ ಹೊಟೇಲ್‍ಗಳ ತಿಂಡಿ-ತಿನಿಸುಗಳ ದರ ಕೂಡ ಹೆಚ್ಚಳವಾಗಿರುವುದು ಜನಸಾಮಾನ್ಯರನ್ನು ಕಂಗೆಡಿಸಿದೆ.