ಮನೆಯ ಮೇಲ್ಛಾವಣಿ ಕುಸಿದು, ಮೂವರು ಮಕ್ಕಳ ದುರ್ಮರಣ

ಕೊಪ್ಪಳ, ಅ.15- ರಾತ್ರಿ ಮಲಗಿದ್ದಾಗ ಮನೆಯ ಮೇಲ್ಚಾವಣಿ ಕುಸಿದು ಮೂರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆಗೆ ಕೊಪ್ಪಳದ ಯಲಮಗೇರಿ ಗ್ರಾಮದಲ್ಲಿ ನಡೆದಿದೆ.

ಸುಜಾತ (22), ಅಮರೇಶ (18) ಹಾಗೂ ಗವಿಸಿದ್ದಪ್ಪ (15) ಮೃತ ದುರ್ದೈವಿಗಳು. ಸೋಮಣ್ಣ ಕುದುರಿಮೋತಿ ಸಾವಿನ ದವಡೆಯಿಂದ ಪಾರಾದ ತಂದೆ. ಇತ್ತೀಚೆಗೆ ಸುರಿದ ಮಳೆಯಿಂದ ಮನೆ ಶಿಥಿಲಗೊಂಡಿತ್ತು. ಆದರೂ ಮನೆ ಬೀಳುವುದಿಲ್ಲ ಎಂಬ ಧೈರ್ಯದಲ್ಲಿ ಎಲ್ಲರೂ ಮನೆಯಲ್ಲೇ ವಾಸವಿದ್ದರು.

ನಿನ್ನೆ ರಾತ್ರಿ ತಂದೆ ಮತ್ತು ಮಕ್ಕಳು ಒಟ್ಟಿಗೆ ಊಟ ಮುಗಿಸಿ ಮಲಗಿದ್ದಾರೆ. ಆದರೆ, ನಡುರಾತ್ರಿ ಮನೆಯ ಮೇಲ್ಚಾವಣಿ ಇದ್ದಕ್ಕಿದ್ದಂತೆ ಕುಸಿದಿದೆ. ಪರಿಣಾಮ ನಿದ್ರೆಯಲ್ಲಿದ್ದ ಮಕ್ಕಳು ತಂದೆಯ ಎದುರೇ ಪ್ರಾಣ ಕಳೆದುಕೊಂಡಿದ್ದಾರೆ.

ಮಕ್ಕಳ ಸಾವಿನಿಂದ ಇಡೀ ಗ್ರಾಮದಲ್ಲಿ ಇದೀಗ ನೀರವಮೌನ ಆವರಿಸಿದ್ದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sri Raghav

Admin