ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನ ಬಂಧನ

Social Share

ಬೆಂಗಳೂರು,ಆ.20-ಪ್ರತಿಷ್ಠಿತ ಬಡಾವಣೆಯ ಮನೆಗಳ ನಕಲಿ ಕೀ ಬಳಸಿ ಚಿನ್ನಾಭರಣಗಳನ್ನು ದೋಚಿದ್ದ ಕುಖ್ಯಾತ ಮನೆಗಳ್ಳನನ್ನು ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿ 37 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಎಚ್‍ಎಸ್‍ಆರ್ ಲೇಔಟ್‍ನ ಶ್ರೀಮಂತರ ಮನೆಗಳನ್ನು ಗುರಿಯಾಗಿಸಿಕೊಂಡು ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಕಲಿ ಕೀ ಬಳಸಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವೂ ಸೇರಿದಂತೆ ಒಟ್ಟು ನಾಲ್ಕು ಕನ್ನಗಳವು ಪ್ರಕರಣಗಳು ನಕಲಿ ಕೀ ಬಳಸಿ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.

ಪೊಲೀಸರ ನಿದ್ದೆಗೆಡಿಸಿದ್ದ ಚಾಲಾಕಿ ಕಳ್ಳನ ಪತ್ತೆಗಾಗಿ ಇನ್‍ಸ್ಪೆಕ್ಟರ್ ಅವರ ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗಿತ್ತು. ಈ ತಂಡ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನ ಜಾಡು ಹಿಡಿದು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದ್ದು, ನಗರಹ ಆಗೂ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕನ್ನಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 37 ಲಕ್ಷ ರೂ. ಬೆಲೆಯ 700 ಗ್ರಾಂ ತೂಕದ ಚಿನ್ನಾಭರಣ, 2 ಕೆಜಿ ಬೆಳ್ಳಿ ಸಾಮಾಗ್ರಿಗಳು ಹಾಗೂ ಹೆಸರಾಂತ ಕಂಪನಿಯ ವಾಚುಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ನಕಲಿ ಕೀಗಳನ್ನು ವಶಪಡಿಸಿಕೊಳ್ಳುವಲ್ಲಿ ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ಸಹಚರನ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.

ಹತ್ತಕ್ಕೂ ಹೆಚ್ಚು ವಾರೆಂಟ್: ಆರೋಪಿ ವಿರುದ್ಧ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಬಂಧನದ ವಾರೆಂಟ್‍ಗಳಿವೆ. ಆರೋಪಿಯ ಬಂಧನದಿಂದ ಎಚ್‍ಎಸ್‍ಆರ್ ಲೇಔಟ್ ಠಾಣೆಯ 4 ಕನ್ನಗಳವು ಪ್ರಕರಣ, ಬಂಡೆಪಾಳ್ಯ ಪೊಲೀಸ್ ಠಾಣೆಯ 2 ಕನ್ನಗಳವು ಪ್ರಕರಣ, ವಿವೇಕನಗರ ಪೊಲೀಸ್ ಠಾಣೆಯ ಒಂದು ಕನ್ನಗಳವು ಪ್ರಕರಣ, ಇಂದಿರಾನಗರ, ಬನಶಂಕರಿ, ಮೈಕೋಲೇಔಟ್ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 10 ಕನ್ನಗಳವು ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಆಗ್ನೇಯ ವಿಭಾಗದ ಉಪಪೊಲೀಸ್ ಆಯುಕ್ತರಾದ ಸಿ.ಕೆ.ಬಾಬಾ, ಸಹಾಯಕ ಪೊಲೀಸ್ ಆಯುಕ್ತ ಲಕ್ಷ್ಮಿನಾರಾಯಣ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ರವಿ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿ ಯನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article