ಹೌಸಿಂಗ್ ಬೋರ್ಡ್‍ನಿಂದ 50,000 ನಿವೇಶನ ಹಂಚಿಕೆ

Social Share

ಬೆಂಗಳೂರು,ಆ.19- ರಾಜ್ಯದಲ್ಲಿ ಗೃಹ ಮಂಡಳಿ ವತಿಯಿಂದ ಈ ವರ್ಷ 50 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ ಕೆಟಗರಿ ಅಡಿಯಲ್ಲಿ ಶೇ.5ರಷ್ಟು ನಿವೇಶನ ಹಂಚಿಕೆಗೂ ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ ಎಂದರು.

ಸೂರ್ಯನಗರದ 4ನೇ ಹಂತದಲ್ಲಿ 30 ಸಾವಿರ ನಿವೇಶನಗಳು ಹಂಚಿಕೆಗೆ ಸಿದ್ದವಾಗಿದೆ. ರಾಜ್ಯದ ವಿವಿಧೆಡೆ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದರು. ಈಗಾಗಲೇ ದಾವಣೆಗೆರೆಯ ಹರಿಹರದಲ್ಲಿ 50 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದ 6 ಸಾವಿರ ನಿವೇಶನಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ಹಂಚಿಕೆ ಮಾಡಲಾಗಿದೆ.

ಇನ್ನೊಂದು ತಿಂಗಳಲ್ಲಿ 6 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಈ ಪೈಕಿ ಮೈಸೂರಿನ ಇಲವಾಲದ 523, ನೆಲಮಂಗಲ ಬಳಿಯ ಮಾದನಾಯಕನಹಳ್ಳಿಯಲ್ಲಿ 2 ಸಾವಿರ, ಮುಂಡರಗಿಯಲ್ಲಿ 665 ನಿವೇಶನಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 6000 ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ದೇಶಿಸಲಾಗಿದೆ ಎಂದರು.

ಇದಲ್ಲದೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 18 ಯೋಜನೆಗಳ 103 ಪ್ರಕರಣಗಳು ಇತ್ಯರ್ಥವಾಗಿವೆ. ಯಾಲಯದವರೆಗೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಪರಿಹಾರ ಧನದ ಬದಲಾಗಿ ಅಭಿವೃದ್ಧಿಪಡಿಸಿದ ಶೇ.50ರಷ್ಟು ನಿವೇಶನಗಳನ್ನು ರೈತರಿಗೆ ನೀಡಿ, ಉಳಿದ ಶೇ.50ರಷ್ಟು ನಿವೇಶನಗಳನ್ನು ಗೃಹ ಮಂಡಳಿ ಉಳಿಸಿಕೊಂಡಿದೆ.

ಬೆಂಗಳೂರು, ತುಮಕೂರು, ರಾಮನಗರ, ಮಂಡ್ಯ ಮೈಸೂರು, ಚಿಕ್ಕಮಗಳೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 600 ಎಕರೆ ಪ್ರದೇಶ ಲಭ್ಯವಿದ್ದು, 7 ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಈ 18 ಯೋಜನೆಗಳನ್ನು ವಿಸ್ತೃತ ಯೋಜನಾ ವರದಿ ತಯಾರಿಸಿ ಟೆಂಡರ್ ಕರೆಯಲಾಗುವುದು. ಅಕ್ಟೋಬರ್, ನವೆಂಬರ್ ವೇಳೆಗೆ ಟೆಂಡರ್ ಅಂತಿಮಗೊಳಿಸಿ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಿಸಲು 7 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ನೀಡಲಾಗಿದೆ ಎಂದರು. ಬೆಂಗಳೂರಿನ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ 48 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದ್ದು, ಶೀಘ್ರದಲ್ಲೇ 2 ಸಾವಿರ ಮನೆಗಳನ್ನು ಅಗ್ರಹಾರಪಾಳ್ಯ ಮೊದಲಾದ ಕಡೆಗಳಲ್ಲಿ ನೀಡಲು ಉದ್ದೇಶಿಸಲಾಗಿದೆ.

ನವೆಂಬರ್‍ನಲ್ಲಿ 15ರಿಂದ 16 ಸಾವಿರ ಮನೆಗಳನ್ನು ನೀಡುವ ಉದ್ದೇಶವಿದೆ. ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ 60 ಸಾವಿರ ಮನೆಗಳು ಸಿದ್ದವಿದ್ದು, ಡಿಸೆಂಬರ್‍ನೊಳಗೆ 45 ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

Articles You Might Like

Share This Article