ವಸತಿ ಯೋಜನೆ ಪದೇ ಪದೇ ಮುಂದೂಡಿಕೆ : ಕಾಗೇರಿ ಅಸಮಾಧಾನ

Social Share

ಬೆಂಗಳೂರು,ಮಾ.7-ವಸತಿ ಯೋಜನೆಗಳನ್ನು ಪದೇ ಪದೇ ಮುಂದೂಡುತ್ತಾ ಅನುದಾನ ಬಿಡುಗಡೆ ಮಾಡದಿರುವುದಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಜರುಗಿತು. ಪ್ರಶ್ನೋತ್ತರ ಅವಧಿಯಲ್ಲಿ ಸಚಿವ ಸೋಮಣ್ಣ ಉತ್ತರಿಸುತ್ತಿದ್ದಾಗ , ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು ಫಲಾನುಭವಿಗಳನ್ನು ಆಯ್ಕೆ ಮಾಡಿ ಹಲವು ವರ್ಷಗಳೇ ಕಳೆದಿವೆ. ಆದರೆ ಅವರಿಗೆ ಮನೆ ಮಂಜೂರು ಮಾಡದಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಎಲ್ಲರೂ ಗಮನಹರಿಸಬೇಕು ಎಂದು ಸಲಹೆ ಮಾಡಿದರು.
2018-19ರಲ್ಲಿ ಮೀನುಗಾರರಿಗೆ ಮನೆ ಕಟ್ಟಿಸಿಕೊಡುವುದಾಗಿ ಘೋಷಣೆ ಮಾಡಲಾಗಿದೆ. ತಾಂತ್ರಿಕ ಕಾರಣಗಳನ್ನು ವೊಡ್ಡಿ ಮನೆಗಳನ್ನೇ ಮಂಜೂರು ಮಾಡಿಲ್ಲ. ನಮಗೆ ಒಂದು ಮನೆ ಸಿಗುತ್ತದೆ ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಈ ಬಗ್ಗೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವರು ಗಮನಹರಿಸಬೇಕೆಂದು ಸೂಚನೆ ನೀಡಿದರು. ಆಗ ಸೋಮಣ್ಣ ಅವರು ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಇಲಾಖೆಗೆ ಇರುವುದಿಲ್ಲ.
ಆಯಾ ಕ್ಷೇತ್ರಗಳ ಶಾಸಕರು ಸಭೆ ನಡೆಸಿ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಬೇಕು. ನಾನು ಈ ಸದನದ ಮೂಲಕ ಮನವಿ ಮಾಡುತ್ತೇನೆ. ತಕ್ಷಣವೇ ಎಲ್ಲ ಶಾಸಕರು ನಿಮ್ಮ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದರೆ ಕಾಲಮಿತಿಯೊಳಗೆ ಅನುದಾನವನ್ನು ಅನುಷ್ಠಾನ ಮಾಡುತ್ತೇವೆ ಎಂದರು.
ಪಟ್ಟಿಯನ್ನು ಕಳುಹಿಸಿದ ಬಳಿಕ ಜಿಲ್ಲಾ ಮಟ್ಟದಲ್ಲಿ ಡಿಸಿ, ತಾಲ್ಲೂಕು ಮಟ್ಟದಲ್ಲಿ ಇಒ, ಪಿಡಿಒಗಳು ಸೇರಿದಂತೆ ಕೆಳಹಂತದ ಅಧಿಕಾರಿಗಳು ಇದನ್ನು ಮುತುವರ್ಜಿ ವಹಿಸಬೇಕು. ಆದರೆ ನಮ್ಮ ಅಧಿಕಾರಿಗಳು ಎಷ್ಟು ಬಾರಿ ಸೂಚಿಸಿದರೂ ನಿರ್ಲಕ್ಷ್ಯ ತೋರುತ್ತಾರೆ. ಹೀಗಾಗಿ ಯೋಜನೆ ವಿಳಂಬವಾಗಿದೆ ಎಂದರು. ನಾವು ಬಡವರಿಗೆ ಮನೆ ಕಟ್ಟಸಿಕೊಡುತ್ತೇವೆ ಎಂದು ಆಶ್ವಾಸನೆ ಕೊಡುತ್ತೇವೆ. ಅವರು ಕೂಡ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಯಾರೋ ಮಾಡುವ ತಪ್ಪಿನಿಂದ ವಿಳಂಬವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್‍ನ ಯು.ಟಿ.ಖಾದರ್ ಅವರು, 2018-19ನೇ ಸಾಲಿನಲ್ಲಿ ಮಸ್ತ್ಯಾಶ್ರಯ ಯೋಜನೆಯಡಿ ಮಂಗಳೂರು ಕ್ಷೇತ್ರಕ್ಕೆ 29 ಮನೆಗಳನ್ನು ಮಂಜೂರು ಮಾಡುವುದಾಗಿ ಸರ್ಕಾರ ಭರವಸೆ ಕೊಟ್ಟಿತ್ತು. ಮೂರು ವರ್ಷಗಳಾದರೂ ಬಿಡುಗಡೆಯಾಗಿಲ್ಲ. ಮೀನುಗಾರರು ಬಡವರು. ತಮಗೊಂದು ಮನೆ ಸಿಗುತ್ತದೆ ಎಂದು ಆಸೆಗಣ್ಣಿನಿಂದ ನೋಡುತ್ತಾರೆ. ಎರಡುಮೂರು ವರ್ಷಗಳಾದರೂ ಮನೆ ಸಿಗಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಸಚಿವ ಅಂಗಾರ ಪರವಾಗಿ ಉತ್ತರಿಸಿದ ಶಶಿಕಲಾ ಜೊಲ್ಲೆ ಉತ್ತರಿಸಿ, ಮತ್ಸ್ಯಾಶ್ರಯ ಯೋಜನೆಯಡಿ ಮೀನುಗಾರರಿಗೆ ಮನೆ ಕಲ್ಪಿಸಿಕೊಡುವುದು ನಮ್ಮ ಸರ್ಕಾರದ ಕರ್ತವ್ಯ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರಬಹುದು. ಸಂಬಂಧಪಟ್ಟ ಎಲ್ಲ ಸಚಿವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಆಶ್ವಾಸನೆ ನೀಡಿದರು.

Articles You Might Like

Share This Article