ಹುಬ್ಬಳ್ಳಿ-ಧಾರವಾಡ ಮೇಯರ್-ಉಪಮೇಯರ್ ಚುನಾವಣೆಗೆ ಮತ್ತೆ ವಿಘ್ನ

ಹುಬ್ಬಳ್ಳಿ, ಮೇ 17- ಮೀಸಲಾತಿ ಪ್ರಕರಣ ನ್ಯಾಯಾಲಯದಲ್ಲಿರುವಾಗ ಅವಳಿ ನಗರ ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಚುನಾವಣೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮೇಯರ್-ಉಪಮೇಯರ್ ಚುನಾವಣೆ ನಡೆಸದಂತೆ ಅರ್ಜಿದಾರ ರಾದ ಕಿರಣ್ ಸಾಮ್ರಾಣಿ ಹಾಗೂ ಅಲ್ತಾಫ್ ಕಿತ್ತೂರ ಆಗ್ರಹಿಸಿದ್ದಾರೆ.

ಈಗಾಗಲೇ ಮೀಸಲಾತಿ ಹಾಗೂ ವಾರ್ಡ್ ವಿಂಗಡಣೆ ಸೇರಿದಂತೆ ಚುನಾವಣೆಯೇ ಅಸಂವಿಧಾನಿಕವಾಗಿ ನಡೆದಿದ್ದು, ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಮೇಯರ್-ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿ ಮಾಡಿರುವುದು ಸರಿಯಲ್ಲ. ಕೋರ್ಟ್‍ನಲ್ಲಿ ವಿಚಾರಣೆಯಲ್ಲಿರುವಾಗಲೇ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಯರ್-ಉಪಮೇಯರ್ ಆಯ್ಕೆಗೆ ಮತ್ತೊಂದು ವಿಘ್ನ; ಮೇಲ್ಮನವಿ: ಪಾಲಿಕೆ ವಾರ್ಡ್‍ಗಳ ಮೀಸಲಾತಿ ಸಮರ್ಪಕವಾಗಿ ನಡೆದಿಲ್ಲ. ಈ ಸಂಬಂಧ ನ್ಯಾಯಾ ಲಯದ ಮೊರೆ ಹೋಗಲಾಗಿತ್ತು. ಇದೇ ಕಾರಣಕ್ಕೆ ಗೋವಾದಲ್ಲಿ ಚುನಾವಣಾ ಪ್ರಕ್ರಿಯೆ ರದ್ದುಗೊಳಿಸಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಇಡೀ ಚುನಾವಣಾ ಪ್ರಕ್ರಿಯೆ ರದ್ದುಗೊಳಿಸುವಂತೆ ಮನವಿ ಮಾಡಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಮೇಯರ್-ಉಪಮೇಯರ್ ಚುನಾವಣೆ ಘೋಷಣೆಯಾಗಿದೆ.

ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲಾಗುವುದು. ಮೇ 25ರಂದು ಮೇಲ್ಮನವಿ ಸಲ್ಲಿಸುವುದಾಗಿ ಅರ್ಜಿದಾರರು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಮೇಯರ್- ಉಪ ಮೇಯರ್ ಚುನಾವಣೆ ನಡೆಸ ದಂತೆ ಅವರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಚುನಾಯಿತರಾಗಿ ಮನೆಯಲ್ಲಿ ಕುಳಿತಿದ್ದ ಪಾಲಿಕೆ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಕೋರ್ಟ್ ವಿಷಯದಿಂದ ಮತ್ತೆ ತಲೆ ಬಿಸಿಯಾಗುವಂತಾಗಿದೆ. ಈ ಬಗ್ಗೆ ಕೋರ್ಟ್ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.