ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲೂ ಬಿಜೆಪಿಗೆ ಅಧಿಕಾರ : ಕಟೀಲ್

ಧಾರವಾಡ, ಆ.31- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪ್ರಸಕ್ತ ವರ್ಷ 60 ರಿಂದ 62 ಸೀಟುಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಕಲಬುರ್ಗಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ಮೂರೂ ಜಿಲ್ಲಾಗಳಲ್ಲಿ ನಾನು ಪ್ರವಾಸ ಮಾಡಿದ್ದೇನೆ. ಬೆಳಗಾವಿಯಲ್ಲಿ ಪ್ರಸಕ್ತ ವರ್ಷ ಪಾರ್ಟಿ ಚಿನ್ಹೆ ಆಧಾರದ ಮೇಲೆ ಮತದಾನ ನಡೆಯಲಿದೆ ಎಂದರು.

ಹುಬ್ಬಳ್ಳಿ, ಧಾರವಾಡ ಪಾಲಿಕೆಯಲ್ಲಿ ಹತ್ತು ವರ್ಷ ಬಿಜೆಪಿ ಅಧಿಕಾರ ನಡೆಸಿದೆ. ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಮುನ್ನುಡಿ ಬರೆದಿದ್ದೇ ಬಿಜೆಪಿ. ಸ್ಮಾರ್ಟ್ ಸಿಟಿ ಯೋಜನೆ, ಅಮೃತ ಯೋಜನೆ, ಮನೆ ಮನೆಗೆ ಗಂಗೆ, ಗ್ಯಾಸ್ ಯೋಜನೆ ಸೇರಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಅವಳಿ ನಗರಕ್ಕೆ ಸಾಕಷ್ಟು ಅನುದಾನ ತಂದು ಕೆಲಸ ಮಾಡಲಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ ಅವರು, ಸಾಕಷ್ಟು ಅನುದಾನದಿಂದ ವಾರ್ಡ್‍ಗಳ ಅಭಿವೃದ್ಧಿ, ನಗರ ಸೌಂದರ್ಯಿಕರಣ ಮಾಡಿದ್ದಾರೆ. ಪ್ರಸಕ್ತ ವರ್ಷ ಕೂಡ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮುಂದಿನ ಐದು ವರ್ಷಗಳ ಕಾಲ ಅವಳಿನಗರ ಸ್ಮಾರ್ಟ್ ನಗರಗಳಾಗಿ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿರುವವರು ಎಲ್ಲರೂ ಪಂಜರದ ಗಿಣಿಗಳು ಎಂದು ಟೀಕಿಸಿದ ಅವರು ಆ ನಾಯಕರನ್ನು ಕಾಯಲು ಇಬ್ಬರು ಕಾವಲುಗಾರರಾಗಿದ್ದಾರೆ ಸಿದ್ಧರಾಮಯ್ಯ ಹಾಗೂ ಡಿಕೆಶಿ ಅವರುಗಳು. ಕೆಲವು ಗಿಣಿಗಳು ಡಿಕೆಶಿ ಬಳಿ ಇವೆ, ಕೆಲವು ಸಿದ್ಧರಾಮಯ್ಯನವರ ಬಳಿ ಇವೆ ಮೊದಲು ಅವರೆಲ್ಲ ಅದರಿಂದ ಹೊರ ಬರಲಿ ಎಂದರು. ಬೊಮ್ಮಾಯಿ ಅವರು ಸಿಎಂ ಆದ ಮೇಲೆ ಸ್ವತಂತ್ರವಾಗಿ ಎಲ್ಲ ನಿರ್ಧಾರ ತೆಗೆದುಕೊಂಡು ಉತ್ತಮ ಆಡಳಿತ ಕೊಡುತ್ತಿದ್ದಾರೆ. ಬಿಎಸ್‍ವೈ ಸರ್ಕಾರದ ಎಲ್ಲ ಯೋಜನೆಗಳನ್ನ ಅನುಷ್ಟಾನ ಗೊಳಿಸುತ್ತಿದ್ದಾರೆ.

ಕಾಂಗ್ರೆಸ್ ಒಳಜಗಳ ಜಾಸ್ತಿಯಾಗಿದೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಇಷ್ಟು ದಿನವಾದರೂ ಪದಾಧಿಕಾರಿಗಳ ನೇಮಕ ಆಗಿಲ್ಲ. ಒಂದು ಪಕ್ಷದಲ್ಲಿ ಎಷ್ಟು ಜನ ಅಧ್ಯಕ್ಷರು ಇದ್ದಾರೆ, ಸಲಿಂ, ರಾಮಲಿಂಗಾರೆಡ್ಡಿ, ದ್ರವನಾರಾಯಣ, ಖಂಡ್ರೆ ಹಾಗೆಯೇ ಯುವ ಕಾಂಗ್ರೆಸ್‍ಗೆ ನಲಪಾಡ್ ಹಾಗೂ ರಕ್ಷಾರಾಮಯ್ಯ ಇಬ್ಬರು ಅಧ್ಯಕ್ಷರು. ಈಗ ಒಬ್ಬರಿಗೆ ಅಧಿಕಾರ. ಮೂರು ತಿಂಗಳ ನಂತರ ಮತ್ತೊಬ್ಬರಿಗೆ ಅಧಿಕಾರ ಅಂತೆ ಇದೇನಾ ಕಾಂಗ್ರೆಸ್ ಸಂಸ್ಕøತಿ ಎಂದು ಪ್ರಶ್ನಿಸಿದರು.

ಶಾಸಕ ಅಮೃತ ದೇಸಾಯಿ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.